ಕಟೀಲು : ಯಕ್ಷಗಾನ ರಂಗದ ಮಹಾನ್ ಭಾಗವತರಾದ ದಾಮೋದರ ಮಂಡೆಚ್ಚರ ಹೆಸರಿನಲ್ಲಿ ಅವರ ಯಕ್ಷಗಾನದ ಒಡನಾಡಿಗಳಿಗೆ ಕೊಡಲ್ಪಡುವ ಪ್ರಶಸ್ತಿಯನ್ನು ಈ ಬಾರಿ ಮಂಡೆಚ್ಛರ ಶಿಷ್ಯ, ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ನೀಡಿ ಗೌರವಿಸಲಾಗುವುದು ಎಂದು ದಿ. ದಾಮೋದರ ಮಂಡೆಚ್ಚ ಸಂಸ್ಮರಣಾ ಸಮಿತಿಯ ಪ್ರಕಟನೆ ತಿಳಿಸಿದೆ.
ಪ್ರಶಸ್ತಿಯು ರೂ.10,000,ನಗದು, ಸಂಮಾನ ಫಲಕಗಳನ್ನೊಳಗೊಂಡಿದ್ದು, ಜುಲೈ 10 ರ ಆದಿತ್ಯವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಕಾರದಲ್ಲಿ ದೇವಳದ ಸರಸ್ವತಿ ಸದನದಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ನೀಡಲಾಗುವುದು. ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕೆ, ವಾಸುದೇವ ಆಸ್ರಣ್ಣ, ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣ ದಾಸ ಆಸ್ರಣ್ಣ, ದೇವಿಪ್ರಸಾದ ಶೆಟ್ಟಿ ಕಲ್ಲಾಡಿ ಇವರು ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭ ಖ್ಯಾತ ಭಾಗವತರಾದ ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಪ್ರಸಾದ ಬಲಿಪ ಭಾಗವತರ ಸಂಸ್ಮರಣೆಯನ್ನೂ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 3.30ರಿಂದ ಕುಬಣೂರು ಹಾಗೂ ಪೂಂಜರ ಪ್ರಸಂಗಗಳ ಆಯ್ದ ಹಾಡುಗಳ ಪ್ರಸ್ತುತಿಯನ್ನು ದಿನೇಶ್ ಅಮ್ಮಣ್ಣಾಯ, ದೇವಿಪ್ರಸಾದ ಆಳ್ವ ತಲಪಾಡಿ ,ಭವ್ಯಶ್ರೀ ಮಂಡೆಕೋಲು, ಮಹೇಶ್ ಕನ್ಯಾಡಿ ನಡೆಸಿಕೊಡಲಿದ್ದು, ಸಂಜೆ 6.30ರಿಂದ ಕುಬಣೂರು ವಿರಚಿತ ಸಾರ್ವಭೌಮ ಸಂಕರ್ಷಣ ಬಯಲಾಟ ಪ್ರದರ್ಶನವಿದೆ.
ತೆಂಕುತಿಟ್ಟು ಯಕ್ಷಾಗಾನದ ಸಮಕಾಲೀನ ಅಗ್ರಪಂಕ್ತಿಯ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಒಬ್ಬರು. ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯವರು. ಪ್ರೌಢ ಶಿಕ್ಷಣ ಮತ್ತು ವೈದಿಕ ವಿದ್ಯೆ ಕಲಿತು ತೆಂಕುತಿಟ್ಟಿನ ಬಯಲು ರಂಗಸ್ಥಳದಲ್ಲಿ ಸುಶಿಕ್ಷಿತ ಸುಸಂಸ್ಕೃತ ಭಾಗವತರಾಗಿ ಖ್ಯಾತರಾದರು. ವಿಷ್ಣು ಅಮ್ಮಣ್ಣಾಯ ಮತ್ತು ಹರಿನಾರಾಯಣ ಬೈಪಾಡಿತ್ತಾಯರಿಂದ ಯಕ್ಷಗಾನದ ಪ್ರಾಥಮಿಕ ಅಬ್ಯಾಸ ಮಾಡಿದ ಇವರು ತೆಂಕುತಿಟ್ಟಿನ ಮೇರು ಭಾಗವತ ದಾಮೋದರ ಮಂಡೆಚ್ಚರ ಶಿಷ್ಯರಾಗಿ ಕರ್ನಾಟಕ ಮೇಳದಲ್ಲಿ ಮಂಡೆಚ್ಚರೊಂದಿಗೆ ದೀರ್ಘಕಾಲ ಭಾಗವತರಾಗಿ ಸೇವೆ ಸಲ್ಲಿಸಿದರು.
ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಪ್ರಚಲಿತವಿದ್ದ ಅಗರಿ, ಕಡತೋಕ, ಪದ್ಯಾಣ, ಬಲಿಪ, ಶೈಲಿಯಂತೆ ಮಂಡೆಚ್ಚರ ಹಿಂದುಸ್ಥಾನಿ ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಇವರನ್ನು ಗುರುತಿಸಬಹುದು. ಕರ್ನಾಟಕ ಯಕ್ಷಗಾನ ನಾಟಕಸಭಾ, ಕುಂಡಾವು, ಪುತ್ತೂರು, ಕದ್ರಿ, ಎಡನೀರು ಮುಂತಾದ ಮೇಳಗಳಲ್ಲಿ ಸುದೀರ್ಘ ೪೦ ವರ್ಷ ಕಲಾಸೇವೆ ಮಾಡಿದ ಇವರು ತುಳು ಕನ್ನಡ ಪ್ರಸಂಗಗಳ ಯಕ್ಷಗಾನಗಳಲ್ಲಿ ಹೆಸರು ಮಾಡಿದವರು.
Kshetra Samachara
05/07/2022 07:42 pm