ಮೂಡುಬಿದಿರೆ: ತುಳುನಾಡಿನ ದೈವಾರಾಧನೆಯು ಪ್ರಾದೇಶಿಕ ಮಹತ್ವವುಳ್ಳದ್ದು. ಈ ಆಚರಣೆಯ ಆಚಾರ- ವಿಚಾರ, ನಡೆ-ನುಡಿ, ಉಡುಗೆ-ತೊಡುಗೆ, ವರ್ಣ-ಅಲಂಕಾರ ಮತ್ತು ಸಾಮಾಜಿಕ ನ್ಯಾಯ ದೈವಾರಾಧನೆ ತುಳು ಸಂಸ್ಕೃತಿಯನ್ನು ಶ್ರೇಷ್ಠವಾಗಿಸುವುದರ ಜೊತೆಗೆ ಸರ್ವ ಕಾಲಕ್ಕೂ ಒಪ್ಪಿತ ಆಚರಣೆಯನ್ನಾಗಿಸಿದೆ ಎಂದು ಸಿನಿಮಾ ನಟ, ನಿರ್ಮಾಪಕ, ಉದ್ಯಮಿ ತಮ್ಮಣ್ಣ ಶೆಟ್ಟಿ ಹೇಳಿದರು.
ಅವರು ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ 'ನುಡಿ ತೋರಣ' ಸಂಸ್ಕೃತಿ ಚಿಂತನಾ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ತುಳುವರ ಆರಾಧನಾ ಸಂಸ್ಕೃತಿ ಮತ್ತು ಮೌಲ್ಯಗಳು' ಎಂಬ ವಿಷಯದ ಕುರಿತು ಮಾತನಾಡಿದರು.
ತುಳುವರ ಅನೇಕ ಸಂಪ್ರದಾಯ, ಹಬ್ಬ, ಕಟ್ಟುಪಾಡು ಗಳಲ್ಲಿ ಚರ್ಚ್,ಮಸೀದಿ ಮತ್ತು ದೇವಸ್ಥಾನಗಳ ನಡುವೆ ಇರುವ ಸಂಬಂಧ ತುಳುನಾಡಿನ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯ ಬೆಳೆಸುವಲ್ಲಿ ಸಹಕಾರಿಯಾಗಿದೆ. ಆದರೆ ಆಧುನಿಕ ಭರಾಟೆಯಲ್ಲಿ ಸಂಸ್ಕೃತಿಯ ವಿನಾಶವಾಗುತ್ತಿರುವುದು ವಿಷಾದನೀಯವಾದುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ತುಳುವರ ಹೃದಯ ವೈಶಾಲ್ಯತೆಯಿಂದಾಗಿ ಧಾರ್ಮಿಕ ಸೌಹರ್ದತೆ ನೆಲೆ ನಿಂತಿದೆ. ದೈವರಾಧನೆ ತುಳುನಾಡಿನ ಶ್ರೀಮಂತ ಸಂಸ್ಕೃತಿಯ ಪ್ರತೀಕ ಎಂದರು. ಇಂದಿನ ಯುವಪೀಳಿಗೆಗೆ ಈ ಸಂಸ್ಕೃತಿಯ ಪರಿಚಯವಾಗಬೇಕು. ತುಳುವರ ಜೀವನ ಶೈಲಿ, ಆಹಾರ ಪದ್ಧತಿ, ಆರಾಧನಾ ಮನೋಭಾವ ಎಂದಿಗೂ ಪ್ರಸ್ತುತ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಕುರಿಯನ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗೀಶ್ ಕೈರೋಡಿಯವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸ್ಪರ್ಶಾ ಪಂಜಿಕಲ್ಲು ಕಾರ್ಯಕ್ರಮ ನಿರೂಪಿಸಿ ಸುಶ್ಮಿತಾ ವಂದಿಸಿದರು.
Kshetra Samachara
23/05/2022 05:12 pm