ಮಂಗಳೂರು: ತನಗೆ ದೊರಕಿರುವ ಪಾಕೆಟ್ ಮನಿಯನ್ನು ಉಳಿಸಿ 6ರ ಹರೆಯದ ಬಾಲಕನೋರ್ವ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾನೆ.
ನಗರದ ಕುದ್ರೋಳಿ ವಿಶಾಲ್ ನರ್ಸಿಂಗ್ ಹೋಮ್ ಬಳಿಯ ಮನೆ ನಿವಾಸಿ ಅರ್ನವ್ ಪ್ರಭು ದೇಣಿಗೆ ನೀಡಿದ ಬಾಲಕ. ಒಂದನೇ ತರಗತಿ ವಿದ್ಯಾರ್ಥಿಯಾಗಿರುವ ಅರ್ನವ್ ಪ್ರಭು, ಕಳೆದ ಆರು ತಿಂಗಳಿನಿಂದ ಪೋಷಕರು ನೀಡುತ್ತಿದ್ದ ಪಾಕೆಟ್ ಮನಿಯನ್ನು ಶ್ರೀರಾಮ ಮಂದಿರ ನಿರ್ಮಾಣ ದೇಣಿಗೆಗಾಗಿ ಒಟ್ಟು ಮಾಡುತ್ತಿದ್ದ.
ನಿನ್ನೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಕರ್ತರು ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲು ಅರ್ನವ್ ಪ್ರಭು ಮನೆಗೆ ಹೋಗಿದ್ದಾರೆ. ಈ ಸಂದರ್ಭ ಆತನ ಪೋಷಕರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪಾಕೆಟ್ ಮನಿಯನ್ನು ಸಂಗ್ರಹ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಆಗ ಪಾಕೆಟ್ ಮನಿ ಡಬ್ಬವನ್ನು ಒಡೆದಾಗ ಅದರಲ್ಲಿ 610 ರೂ. ನಗದು ಸಂಗ್ರಹವಾಗಿತ್ತು. ಆ ಹಣವನ್ನು ಅರ್ನವ್ ಪ್ರಭು ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾನೆ. ಬಾಲಕನ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
Kshetra Samachara
02/02/2021 01:38 pm