ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಪಾರಿವಾಳ ಕಳವು ಪ್ರಕರಣ; 24 ಗಂಟೆಯೊಳಗೆ ಮೂವರು ಆರೋಪಿಗಳು ಅಂದರ್

ಬಂಟ್ವಾಳ: ಆಟೋರಿಕ್ಷಾದಲ್ಲಿ ಬಂದು ಸುಮಾರು 20 ಸಾವಿರ ರೂ. ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ದೂರು ನೀಡಿದ 24 ಗಂಟೆಯೊಳಗೆ ವಿಟ್ಲ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ಕರಡಿ ನಾಸಿರ್ (24), ಕಾವಲಕಟ್ಟೆ ಮೂಲದ ಪಾತ್ರತೋಟ ನಿವಾಸಿ ರಿಝ್ವಾನ್ (19), ಬೋಳಂತೂರು ಮೂಲದ ಅಮ್ಟೂರು ನಿವಾಸಿ ಮಹಮ್ಮದ್ ಅಫೀಝ್ (18) ಬಂಧಿತರು.

ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ ರಿಝ್ವಾನ್ ಹಾಗೂ ರಿಕ್ಷಾ ಚಾಲಕ ಕರಡಿ ನಾಸಿರ್ ಅವರ ಪತ್ನಿಯರು ಅಕ್ಕ ತಂಗಿಯರಾಗಿದ್ದು, ಒಕ್ಕೆತ್ತೂರು ಮೂಲೆ ಮನೆಯಲ್ಲಿ ಸುಲೈ ಯಾನೆ ಸುಲೈಮಾನ್ ಪಾರಿವಾಳ ಸಾಕುತ್ತಿರುವುದನ್ನು ಗಮನಿಸಿ, ಕಳ್ಳತನದ ಯೋಜನೆ ಹಾಕಿದ್ದರೆನ್ನಲಾಗಿದೆ.

ಜ.2ರ ತಡರಾತ್ರಿ 1 ಗಂಟೆ ಸುಮಾರಿಗೆ ರಿಕ್ಷಾದಲ್ಲಿ ಮೂವರು ಮನೆಯಂಗಳಕ್ಕೆ ಆಗಮಿಸಿ ಪಾರಿವಾಳದ ಗೂಡಿನ ಬೀಗ ಮುರಿದು ಕಳ್ಳತನ ಮಾಡಿ ರಿಕ್ಷಾದಲ್ಲಿ ಪಲಾಯನ ಮಾಡಿದ್ದರು. ಲೈಟ್ ಬೆಳಕಿನಲ್ಲಿ ಮುಖವನ್ನು ಗಮನಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ಬುಧವಾರ ವಿಟ್ಲ ಠಾಣೆಗೆ ಸುಲೈ ದೂರು ನೀಡಿದ್ದರು.

ರಿಕ್ಷಾದಲ್ಲಿ ಪಾರಿವಾಳಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿಗಳು ಮುಡಿಪು ಕಡೆಯಿಂದ ಸಾಲೆತ್ತೂರು ಕಡೆ ಬರುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಸಾಲೆತ್ತೂರು ಕೊಡಂಗೆಯಲ್ಲಿ ವಿಟ್ಲ ಪೊಲೀಸರು ತನಿಖೆ ನಡೆಸುವ ಸಂದರ್ಭ ಆರೋಪಿಗಳು ಪತ್ತೆಯಾಗಿದ್ದಾರೆ.

ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು 22 ಪಾರಿವಾಳಗಳು ಲಭಿಸಿದ್ದು, ಕೃತ್ಯಕ್ಕೆ ಬಳಸಿದ ರಿಕ್ಷಾ ವಶಕ್ಕೆ ಪಡೆಯಲಾಗಿದೆ.

ರಿಝ್ವಾನ್ ಗೆಳೆಯ ಅಫೀಝ್ ಬೆಂಗಳೂರು ನೀಲಾದ್ರಿ ರಸ್ತೆಯ ಹೈಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಮನೆಗೆ ಆಗಮಿಸಿದ್ದ ಎನ್ನಲಾಗಿದೆ. ಕರಡಿ ನಾಸಿರ್ ಮೇಲೆ ಈಗಾಗಲೇ ಮುಡಿಪುವಿನ ಎರಡು ಕಡೆ ರಾಬರಿ ನಡೆಸಿದ ಎರಡು ಪ್ರಕರಣ ಹಾಗೂ ಗಾಂಜಾ ಮಾರಾಟ ಮಾಡಿದ ಆರೋಪದಲ್ಲಿ ಕೊಣಾಜೆ ಠಾಣೆಯಲ್ಲಿ ಒಂದು ಪ್ರಕರಣವಿದೆ. ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಪ್ರೊಬೆಶನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿ ಪ್ರಸನ್ನ, ಜಯಕುಮಾರ್, ಪ್ರತಾಪ್ , ವಿನಾಯಕ, ಹೇಮರಾಜ್ ಅವರ ತಂಡ ತ್ವರಿತ ಕಾರ್ಯಾಚರಣೆ ನಡೆಸಿತ್ತು.

Edited By : Nagaraj Tulugeri
Kshetra Samachara

Kshetra Samachara

07/01/2021 08:08 pm

Cinque Terre

18.35 K

Cinque Terre

4

ಸಂಬಂಧಿತ ಸುದ್ದಿ