ಪುತ್ತೂರು: ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದು, ಗಾಂಜಾ ಸಹಿತ ಸುಮಾರು 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಕೇರಳದ ಪೈವಳಿಕೆ ಗ್ರಾಮದ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್(26), ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ರಿಯಾಝ್ (27), ಪುತ್ತೂರು ತಾಲೂಕಿನ ಕಬಕ ನಿವಾಸಿ ಅಬ್ದುಲ್ ಖಾದರ್ ಜಾಬಿರ್(23) ಮತ್ತು ಬನ್ನೂರು ನಿವಾಸಿ ಅಬ್ದುಲ್ ನಝೀರ್(37) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಎರಡು ಕಾರುಗಳಲ್ಲಿ ಕೇರಳದಿಂದ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಿತು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಎಂಬಲ್ಲಿ ದಾಳಿ ನಡೆಸಿದ ಪೊಲೀಸರು 1.25 ಲಕ್ಷ ರೂ. ಮೌಲ್ಯದ 6.360 ಕೆ.ಜಿ. ಗಾಂಜಾ, ಎರಡು ಕಾರುಗಳು ಹಾಗೂ 5 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/12/2020 04:18 pm