ಮಂಗಳೂರು: ಗೋಕರ್ಣನಾಥ ಕೋ- ಆಪರೇಟಿವ್ ಬ್ಯಾಂಕ್ ಹಂಪನಕಟ್ಟೆ ಶಾಖೆಯಿಂದ ಜನರೇಟರ್ ಖರೀದಿಗೆ ಸಾಲ ಪಡೆದು 4.50 ಲಕ್ಷ ರೂ. ವಂಚನೆ ಮಾಡಿರುವುದಾಗಿ ದೂರು ನೀಡಲಾಗಿದೆ.
ಕಿಶೋರ್‌ಕುಮಾರ್ ವಂಚನೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ. 2018ರ ಸೆ.14ರಂದು ಆರೋಪಿ ಜನರೇಟರ್ ಖರೀದಿಸುವ ಉದ್ದೇಶದಿಂದ 4.50 ಲಕ್ಷ ರೂ. ಕೈಗಾರಿಕಾ ಸಾಲ ಪಡೆದುಕೊಂಡಿದ್ದ. ಸಾಲಕ್ಕೆ ವಿಷ್ಣುದಾಸ ಎಂಬವರು ಜಾಮೀನುದಾರರಾಗಿದ್ದು, ಆರೋಪಿಯ ಪತ್ನಿ ಸುಶೀಲಾ ಅವರ ವಿಮೆ ಪಾಲಿಸಿ ಹೆಚ್ಚಿನ ಭದ್ರತೆಗೆ ಇಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಲದ ಹಣವನ್ನು ಜನರೇಟರ್ ಪೂರೈಕೆದಾರ ಬಂಟ್ಸ್ ಹಾಸ್ಟೆಲ್‌ನ ಸಾಯಿರಾಂ ಟ್ರೇಡಿಂಗ್ ಕಂಪೆನಿ ನೀಡಿದ ಕೊಟೇಶನ್‌ನಂತೆ ನೀಡಲಾಗಿದೆ. ಆರೋಪಿ ಖರೀದಿಸಿದ ಜನರೇಟರ್ ಪರಿಶೀಲನೆಗೆ ಬ್ಯಾಂಕಿನಿಂದ ತೆರಳಿದಾಗ ಜನರೇಟರ್‌ನ್ನು ಹಾಜರುಪಡಿಸದೆ, ಆರೋಪಿ ನೀಡಿದ ವಿಳಾಸದಲ್ಲಿ ಇಲ್ಲದೆ ನಾಪತ್ತೆಯಾಗಿದ್ದಾನೆ. ಆರೋಪಿ ಕಿಶೋರ್, ಸಾಯಿರಾಂ ಟ್ರೇಡಿಂಗ್ ಕಂಪೆನಿಯ ಹರಿಕಿಶನ್ ಎಂಬಾತನ ಜತೆಗೂಡಿ ಜನರೇಟರ್ ಖರೀದಿಸುವ ನೆಪದಲ್ಲಿ ಬ್ಯಾಂಕಿನಿಂದ ಸಾಲ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
27/11/2020 10:11 pm