ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಖದೀಮರು ಮಹಿಳೆಯರಿಂದ 2.34 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾದ ಘಟನೆ ನಡೆದಿದ್ದು, ಕಾವೂರು ಹಾಗೂ ಕದ್ರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ರಶ್ಮಿ ಎಂಬವರು ಶಾಂತಿನಗರದ ಹೋಂಡಾ ಶೋ ರೂಂನಲ್ಲಿ ಕೆಲಸ ಮುಗಿಸಿ ಪಂಜಿಮೊಗರಿನ ಉರುಂದಾಡಿಗುಡ್ಡೆಯಲ್ಲಿರುವ ಮನೆ ಕಡೆಗೆ ಹೋಗುತ್ತಿದ್ದರು. ಈ ವೇಳೆ ರಾಘವೇಂದ್ರ ಮಠದ ಹತ್ತಿರ ಅಪರಿಚಿತನೊಬ್ಬ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ಭಯಗೊಂಡು ರಶ್ಮಿ ತನ್ನ ತಾಯಿಗೆ ಕರೆ ಮಾಡಿದ್ದು, ಅಷ್ಟರಲ್ಲಿ ಆ ವ್ಯಕ್ತಿ ಹಿಂದುಗಡೆಯಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಎಳೆದೊಯ್ದಿದ್ದಾನೆ. ಕರಿಮಣಿ ಸರ 22 ಗ್ರಾಂ ಇದ್ದು ಅದರ ಅಂದಾಜು ಮೌಲ್ಯ 80,000 ರೂ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗೀತಾ ಎಂಬವರು ಕದ್ರಿಯಲ್ಲಿರುವ ಸಂಬಂಧಿಕರ ಮನೆಯಿಂದ ಬುಧವಾರ ಸಂಜೆ ತನ್ನ ಮನೆಗೆ ಮರಳುತ್ತಿದ್ದಾಗ ಕೆಪಿಟಿ ಬಳಿಯ ಆರ್‌ಟಿಒ ಮೈದಾನ ಬಳಿ ವ್ಯಾಸನಗರದಲ್ಲಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಲ್ಲಿ ಅಪರಿಚಿತ ವ್ಯಕ್ತಿ ಬೈಕ್ ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸುತ್ತಿದ್ದ. ಆತನನ್ನು ದಾಟಿ ಮುಂದೆ ಹೋದ ನಂತರ ಆತ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಸುಮಾರು 54,000 ರೂ. ಮೌಲ್ಯದ 13 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು ಸುಮಾರು 1 ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ಸರ ಸಹಿತ 1,54,000 ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಹೋಗಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿಕೇಸ್ ದಾಖಲಾಗಿದೆ.
Kshetra Samachara
20/11/2020 09:13 am