ಸುಳ್ಯ: ಸುಮಾರು 21 ಗಂಟೆ ವರೆಗೆ ತೋಡಿನಲ್ಲಿಯೇ ಬಿದ್ದಿದ್ದ ವ್ಯಕ್ತಿಯೊಬ್ಬರ ಮೃತದೇಹವನ್ನು ಪಂಜ ಗ್ರಾಪಂ ಸಿಬಂದಿ ಸುಬ್ರಹ್ಮಣ್ಯ ಠಾಣೆ ಪೊಲೀಸರು ಹಾಗೂ ಸ್ಥಳೀಯರ ನೆರವಿನೊಂದಿಗೆ ಮೇಲಕ್ಕೆತ್ತಿದ್ದಾರೆ.
ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ 18 ಗಂಟೆ ಬಳಿಕವೂ ಶವ ಮೇಲಕ್ಕೆತ್ತಿ ಅಂತ್ಯ ಸಂಸ್ಕಾರ ಮಾಡದೆ ಮೀನ ಮೇಷ ಎಣಿಸುತ್ತಿದ್ದ ಸರಕಾರಿ ಇಲಾಖೆ ಅಧಿಕಾರಿಗಳ ಅಮಾನವೀಯತೆ ಬಗ್ಗೆ ಮಾಧ್ಯಮಗಳು ಗಮನ ಸೆಳೆದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಶವಕ್ಕೆ ಮುಕ್ತಿ ಕಾಣಿಸಲು ಮುಂದಾಗಿದ್ದಾರೆ.
ಪಲ್ಲೋಡಿಯ ಚೋಮ ಅಜಲರ ಪುತ್ರ ರಾಜು ಅಜಲ ತೋಡಿಗೆ ಬಿದ್ದು ಮೃತಪಟ್ಟವರು. ಕೆಲ ವರ್ಷಗಳ ಹಿಂದೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದ ರಾಜು ಬಳಿಕ ಶಾಶ್ವತ ದೈಹಿಕ ನ್ಯೂನ್ಯತೆಗೆ ಒಳಗಾಗಿದ್ದರು. ಒಂದು ಕೋಲು ಹಿಡಿದು ನಡೆದಾಡುತ್ತಿದ್ದ ಇವರು ಪಂಜ ಬಳಿಯ ನೆಲ್ಲಿಕಟ್ಟೆಯಿಂದ ಜಳಕದ ಹೊಳೆಗೆ ಹೋಗುವ ದಾರಿಯ ಗುಂಡಡ್ಕದಲ್ಲಿ ಆಯಾ ತಪ್ಪಿ ತೋಡಿಗೆ ಬಿದ್ದಿದ್ದಾರೆ.
ತೋಟಕ್ಕೆ ತೆರಳುತಿದ್ದ ಸ್ಥಳೀಯರೊಬ್ಬರು ನೀರಿರುವ ಆಳಗುಂಡಿಯಲ್ಲಿ ಶವ ಇರುವುದನ್ನು ಗಮನಿಸಿ ನಿನ್ನೆ ಸಂಜೆ ಆರರ ಸುಮಾರಿಗೆ ಪಂಜ ಪಿಡಿಒ ಹಾಗೂ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಪರಿಶೀಲನೆಗೆ ಬಂದ ಸುಬ್ರಹ್ಮಣ್ಯ ಪೊಲೀಸರು ನಾಳೆ ಬರುವುದಾಗಿ ತಿಳಿಸಿ ಸ್ಥಳದಿಂದ ತೆರಳಿದ್ದರು. ಇಂದು ಬೆಳಿಗ್ಗೆ ಪಂ. ಪಿಡಿಒ ಪುರುಷೋತ್ತಮ್ ಹಾಗೂ ಸಿಬ್ಬಂದಿ ಬಂದು ನೋಡಿಕೊಂಡು ಹೋಗಿದ್ದರು.
ಇಂದು ಮಧ್ಯಾಹ್ನವಾದರೂ ಶವ ವಿಲೇವಾರಿಗೆ ಮಾತ್ರ ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಮಾಧ್ಯಮಗಳ ಮೊರೆ ಹೋಗಿದ್ದರು. ಬಳಿಕ ಸುಬ್ರಹ್ಮಣ್ಯ ಎಸ್ ಐ ಓಮನ ಹಾಗೂ ಸಿಬಂದಿ, ಪಂಜ ಗ್ರಾ ಪಂ ಸಿಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನಿಂದ ಶವವನ್ನು ತೋಡಿನಿಂದ ಮೇಲಕ್ಕೆತ್ತಿದರು. ಗ್ರಾಪಂ ಸಿಬಂದಿ ಪ್ರದೀಪ್, ಮಾಜಿ ಗ್ರಾಪಂ ಸದಸ್ಯ ಲಕ್ಷ್ಮಣ ಉಪಸ್ಥಿತರಿದ್ದರು. ಮೃತ ರಾಜು ಅವರ ಸಹೋದರ ಈ ಹಿಂದೆಯೇ ಮೃತಪಟ್ಟಿದ್ದಾರೆ. ಹಾಗಾಗಿ ಇವರ ಅಂತ್ಯ ಸಂಸ್ಕಾರ ನಡೆಸಲು ಗ್ರಾ.ಪಂ.ಗೆ ಕುಟುಂಬಸ್ಥರು ಅನುಮತಿ ನೀಡಿದ್ದಾರೆ.
Kshetra Samachara
13/11/2020 06:10 pm