ಬಂಟ್ವಾಳ: ಬುಧವಾರ ರಾತ್ರಿ ಫರಂಗಿಪೇಟೆಯ ತೃಷಾ ಸ್ಟುಡಿಯೋ ಮಾಲೀಕ ದಿನೇಶ್ ಕೊಟ್ಟಿಂಜ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಅಮ್ಮೆಮ್ಮಾರು ನಿವಾಸಿ ಮಹಮ್ಮದ್ ಅರ್ಷದ್(19), ಅಬ್ದುಲ್ ರೆಹಮಾನ್(22) ಮತ್ತು ಮಹಮ್ಮದ್ ಸೈಫುದ್ದೀನ್(22) ಅವರನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಹಾಗೂ ಪೊಲೀಸ್ ಉಪಾಧೀಕ್ಷಕ ವೆಲಂಟೈನ್ ಡಿಸೋಜ, ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪಿ.ಎಸ್.ಐ. ಪ್ರಸನ್ನ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಮತ್ತೊಬ್ಬ ಆರೋಪಿ ಸವಾದ್ ನ ಬಂಧನಕ್ಕೆ ವಿಶೇಷ ತಂಡ ಶ್ರಮಿಸುತ್ತಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಸುಮಾರು 7.15 ಕ್ಕೆ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ಅವರ ತೃಷಾ ಸ್ಟುಡಿಯೋಗೆ ನಾಲ್ವರು ಯುವಕರು ಪೋಟೊ ತೆಗೆಸುವವರಂತೆ ಬಂದು, ಇತ್ತೀಚೆಗೆ ಕುಂಪನಮಜಲು ಎಂಬಲ್ಲಿ ಹೆಣ್ಣು ಮಗುವಿನ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿನೇಶ್ ಹೆಣ್ಣು ಮಗುವಿನ ಕಡೆಯವರಿಗೆ ಬೆಂಬಲ ನೀಡಿದ್ದ ದ್ವೇಷದಿಂದ, ಅದರಲ್ಲಿ ಒಬ್ಬ ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ತಲೆಗೆ, ಬಲ ಕೈಗೆ ಹಾಗೂ ಎಡ ಕಿಬ್ಬೊಟ್ಟೆಗೆ ಹಲ್ಲೆ ನಡೆಸಿದ್ದಾನೆ.
ಆ ವೇಳೆಯಲ್ಲಿ ಅಲ್ಲಿದ್ದ ಶೇಖರ ಪೂಜಾರಿ ಎಂಬವರು ಹಲ್ಲೆಯಾಗುವುದನ್ನು ತಪ್ಪಿಸಲು ಅಲ್ಲೇ ಇದ್ದ ಚೇರ್ ನಿಂದ ಜೋರಾಗಿ ಇಬ್ಬರು ಆರೋಪಿಗಳಿಗೆ ಹೊಡೆದಿದ್ದು ಅವರ ಕೈಗೆ ಗಾಯವಾಗಿದೆ.
ನಂತರ ದಿನೇಶ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ನಡೆದ 12 ತಾಸಿನೊಳಗೆ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
Kshetra Samachara
29/10/2020 07:20 am