ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ಶಿಮಂತೂರು ಮಜಲ ಗುತ್ತು ಮೂಲದ ರಾಹುಲ್ ಶೆಟ್ಟಿ ಮಹಾರಾಷ್ಟ್ರದಲ್ಲಿ ಗುಂಡಿಕ್ಕಿ ಹತ್ಯೆ

ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಮಜಲಗುತ್ತು ಮೂಲದ ಯುವಕ ಶಿವಸೇನೆ ಮುಖಂಡನನ್ನು ಮಹಾರಾಷ್ಟ್ರದ ಲೋನಾವಾಲಾದಲ್ಲಿ ರಾಜಕೀಯ ವೈಷಮ್ಯದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮೃತ ಯುವಕನನ್ನು ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ (38) ಎಂದು ಗುರುತಿಸಲಾಗಿದೆ. ಮೂಲತಃ ಶಿಮಂತೂರಿನ ಮಜಲಗುತ್ತು ನಿವಾಸಿಯಾಗಿದ್ದ ರಾಹುಲ್ ಶೆಟ್ಟಿ ಮಹಾರಾಷ್ಟ್ರದ ಲೋನಾವಾಲಾ ಜಯಚಂದ್ ಚೌಕ್ ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು.

ಎಂದಿನಂತೆ ಹೋಟೆಲಿನ ಎದುರುಗಡೆ ಬೆಳಗಿನ ಜಾವ ಚಹಾ ಕುಡಿಯುತ್ತಿರುವಾಗ ಅಪರಿಚಿತರು ಬಂದು ಗುಂಡು ಹಾರಿಸಿ ಹಾಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಗುಂಡಿನ ಏಟಿನಿಂದ ತೀವ್ರ ಗಾಯಗೊಂಡ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಮಾಜಿ ಕಾರ್ಪೊರೇಟರ್ ಸೌಮ್ಯ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರು ಸೂರಜ್ ಅಗರ್ವಾಲ್ ಮತ್ತು ದೀಪಾಲಿ ಭಿಲಾರೆ ಎಂಬವರನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಮೃತ ರಾಹುಲ್ ಶೆಟ್ಟಿ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಗುರುತಿಸಿಕೊಂಡಿದ್ದು ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರಾಜಕೀಯ ವೈಷಮ್ಯದಿಂದ ಕೊಲೆ ನಡೆಸಿರಬಹುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರಾಹುಲ್ ಶೆಟ್ಟಿ ಯ ತಂದೆ ದಿ.ಉಮೇಶ್ ಶೆಟ್ಟಿ ಶಿವಸೇನೆಯಲ್ಲಿ ಪ್ರಭಾವಿ ನಾಯಕರಾಗಿದ್ದು, ಮೂವತ್ತು ವರ್ಷಗಳ ಹಿಂದೆ ರಾಜಕೀಯ ವೈಷಮ್ಯ ದಿಂದ ಹತ್ಯೆಗೀಡಾಗಿದ್ದರು.

ರಾಹುಲ್ ಶೆಟ್ಟಿ ಮಜಲಗುತ್ತು ಹಾಗೂ ಶಿಮಂತೂರಿನಲ್ಲಿ ನಡೆಯುತ್ತಿರುವ ಪ್ರತಿ ಕಾರ್ಯಕ್ರಮಗಳಲ್ಲಿ ಬಂದು ಭಾಗಿಯಾಗುತ್ತಿದ್ದರು ಎಂದು ಅವರ ಆತ್ಮೀಯರಲ್ಲಿ ಒಬ್ಬರಾದ ಬಾಬಾ ರಂಜನ್ ಶೆಟ್ಟಿ ಮಜಲಗುತ್ತು ತಿಳಿಸಿದ್ದಾರೆ.

ಅವರು ಮಾತನಾಡಿ, ಕೆಲ ದಿನಗಳ ಹಿಂದೆಯಷ್ಟೇ ಮಜಲಗುತ್ತಿಗೆ ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

27/10/2020 10:21 am

Cinque Terre

15.95 K

Cinque Terre

0

ಸಂಬಂಧಿತ ಸುದ್ದಿ