ಬಂಟ್ವಾಳ: ತನ್ನದೇ ಶೈಲಿ ಹಾಡುಗಾರಿಕೆಯಿಂದ ಯಕ್ಷಗಾನಪ್ರಿಯರ ಮನ್ನಣೆ ಗಳಿಸಿದ್ದ ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಮೂವರು ಪುತ್ರಿಯರು ಮತ್ತು ಪುತ್ರ (ಹವ್ಯಾಸಿ ಭಾಗವತ ಮುರಳೀಕೃಷ್ಣ ಶಾಸ್ತ್ರಿ)ನನ್ನು ಹಾಗೂ ಅಪಾರ ಬಂಧು ಬಳಗ, ಶಿಷ್ಯ ರು ಹಾಗೂ ಅಭಿಮಾನಿ ವೃಂದವನ್ನು ಅವರು ಅಗಲಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಠಲ ಶಾಸ್ತ್ರಿ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳ ಸಹಿತ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿರುವ ಅವರು, ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು.
ಹವ್ಯಾಸಿ ಭಾಗವತರಾಗಿಯೂ ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು, ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲಿನವರು. 1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ ಶಾಸ್ತ್ರಿ ಸಾವಿತ್ರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ಕರೋಪಾಡಿ ಗ್ರಾಮದ ತೆಂಕಬೈಲ್ ನಲ್ಲಿ ವಾಸಿಸುತ್ತಿದ್ದರು. ಚೆಂಡೆ, ಮದ್ದಳೆ, ಕೊಳಲು ನುಡಿಸುವುದರಲ್ಲೂ ನಿಷ್ಣಾತರು.
ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು, ಬಜಕ್ಕಳ ಗಣಪತಿ ಭಟ್ಟರಿಂದ ಶಾಸ್ತ್ರೀಯ ಸಂಗೀತ ಅಭ್ಯಸಿಸಿದರು. ಹವ್ಯಾಸಿ ಭಾಗವತರಾಗಿಯೇ ಜನಪ್ರಿಯರಾಗಿದ್ದ ಇವರು, ಅಗರಿ ಶೈಲಿಯಿಂದ ಪ್ರಭಾವಿತರಾಗಿ, ದ.ಕ., ಕಾಸರಗೋಡು ಜಿಲ್ಲೆಗಳ ಹಲವಾರು ಹವ್ಯಾಸಿ ಆಟ, ಕೂಟಗಳಿಗೆ ಭಾಗವತಿಕೆ ಮಾಡಿದ್ದಾರೆ. ಪೌರಾಣಿಕ ಪ್ರಸಂಗಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ಅವರು, ದಕ್ಷಾಧ್ವರ, ಕರ್ಣಪರ್ವ, ದೇವಿ ಮಹಾತ್ಮೆ, ಕೃಷ್ಣಲೀಲೆ-ಕಂಸವಧೆ, ಭಾರ್ಗವ ವಿಜಯ, ಕೃಷ್ಙಾರ್ಜುನ ಸಹಿತ ಹಲವು ಪ್ರಸಂಗಗಳಲ್ಲಿ ತೆಂಕಬೈಲು ಶೈಲಿ ಪ್ರಸ್ತುತಪಡಿಸುತ್ತಿದ್ದರು.
Kshetra Samachara
27/09/2020 02:26 pm