ಮುಲ್ಕಿ: ಮುಲ್ಕಿ ಸಮೀಪದ ಹಳೆಯಂಗಡಿ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ಹೆಜಮಾಡಿಯಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮಗುಚಿ ಓರ್ವ ನೀರುಪಾಲಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ನೀರುಪಾಲಾದ ವ್ಯಕ್ತಿಯನ್ನು ಹೆಜಮಾಡಿ ಬಳಿಯ ಸುಕೇಶ್ ಬಪ್ಪನಾಡು (25) ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಏಕನಾಥ ಕರ್ಕೇರ ಎಂಬವರ ಮಾಲಕತ್ವದ ದೋಣಿಯಲ್ಲಿ ಏಕನಾಥ ಕರ್ಕೇರ, ಪಾಂಡುರಂಗ, ರಾಜೇಶ್, ನೀರಜ್ ಮತ್ತು ನಾಗೇಶ್ , ಸುಕೇಶ್ ಸೇರಿ ಸುಮಾರು ಆರು ಜನ ಮೀನುಗಾರಿಕೆಗೆ ತೆರಳಿದ್ದು ವಾಪಸ್ ಬರುವಾಗ ಸಸಿಹಿತ್ಲುವಿನ ಅಳಿವೆ ಬಾಗಿಲು ಬಳಿ ಬೃಹತ್ ತೆರೆ ಅಪ್ಪಳಿಸಿ ದೋಣಿಯಲ್ಲಿದ್ದ ಸುಕೇಶ್ ಹೊರಗೆಸೆಯಲ್ಪಟ್ಟು ನೀರುಪಾಲಾಗಿದ್ದರೆ ಉಳಿದವರನ್ನು ಬೋಟ್ ಮುಖಾಂತರ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂದರ್ಭ ಸಸಿಹಿತ್ಲು ಅಳಿವೆಬಾಗಿಲು ಬಳಿ ಬಾರೀ ಜನಸಂದಣಿ ಸೇರಿದ್ದು ದೋಣಿಯಲ್ಲಿ ನೀರುಪಾಲಾದ ಯುವಕನ ಬಗ್ಗೆ ಹುಡುಕಾಟ ನಡೆದು ರಾತ್ರಿ 12 ಗಂಟೆಗೆ ಸುಕೇಶ್ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸಸಿಹಿತ್ಲು ಬೀಚ್ ಪರಿಸರದಲ್ಲಿ ದಾರಿದೀಪ ಇಲ್ಲದೆ ಕತ್ತಲಾವರಿಸಿದ ಕಾರಣ ನೀರುಪಾಲಾದ ವ್ಯಕ್ತಿಯ ಹುಡುಕಾಟಕ್ಕೆ ತೀವ್ರ ತೊಂದರೆಯಾಗಿತ್ತು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಹೆಜಮಾಡಿಕೋಡಿ ಮೀನುಗಾರರು, ಜೀವ ರಕ್ಷಕರು, ಕರಾವಳಿ ಕಾವಲು ಪಡೆ ಪೊಲೀಸ್ ಭಾವಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.
Kshetra Samachara
12/10/2020 07:58 am