ನವದೆಹಲಿ: ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ನಿಷೇಧ ಹೇರಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ವೇಳೆ ಹಿಜಾಬ್ ಪರ ವಕೀಲರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗುಪ್ತಾ ಹೇಳಿರುವ ಮಾತು ಗಮನಸೆಳೆದಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಬುಧವಾರದ ವಿಚಾರಣೆ ವೇಳೆ ದೇವದತ್ ಕಾಮತ್ ಸಾಕಷ್ಟು ದೇಶಗಳ ಸಂವಿಧಾನ ಅಲ್ಲಿ ನೀಡಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾತನಾಡಿದರು. ಹೀಗೆ ಮಾತನಾಡುತ್ತಾ, ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕೋರ್ಟ್ ನೀಡಿರುವ ಒಂದು ತೀರ್ಪನ್ನು ಪ್ರಸ್ತಾಪಿಸಿದರು. ತನ್ನ ಸಾಂಸ್ಕೃತಿಕ ನಂಬಿಕೆಯ ಭಾಗವಾಗಿ ದಕ್ಷಿಣ ಆಫ್ರಿಕಾದ ಕೋರ್ಟ್ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿಯನ್ನು ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ. ಭಾರತದಲ್ಲಿ ತನ್ನ ನಂಬಿಕೆಯನ್ನು ಶಾಲೆಗಳಲ್ಲಿ ತೋರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ನ್ಯಾಯಾಲಯದಲ್ಲಿ ಹಾಜರಿದ್ದ ಮಹಿಳಾ ವಕೀಲರು ಧರಿಸಿದ್ದ ಹಿಜಾಬ್ ಕಡೆಗೆ ಕೈತೋರಿಸಿ, ಇದರಿಂದ ನ್ಯಾಯಾಲಯಕ್ಕೆ ಏನಾದರೂ ತೊಂದರೆಯಾಗುತ್ತಿದೆಯೇ? ಕೇಂದ್ರೀಯ ವಿದ್ಯಾಲಯದ ಹಿಜಾಬ್ ನಿಯಮದ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಲಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ವಿಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ಇಂದಿಗೂ ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಧರಿಸುವುದು ಮುಂದುವರೆದಿದೆ. ಒಂದು ಸಮುದಾಯವು ನಂಬಿಕೆಯನ್ನು ಹೊಂದಿದ್ದರೆ, ಜಾತ್ಯತೀತ ನ್ಯಾಯವು ಈ ನಂಬಿಕೆಯನ್ನು ಒಪ್ಪಿಕೊಳ್ಳಬೇಕು. ಅವರು ಈ ನಿರ್ಧಾರವನ್ನು ತಡೆಹಿಡಿಯಬಾರದಿತ್ತು ಎಂದು ಕಾಮತ್ ಹೇಳಿದ್ದಾರೆ.
ಈ ವಾದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಹೇಮಂತ್ ಗುಪ್ತಾ, "ಮೂಗುತಿ ಎನ್ನುವುದು ಎಂದಿಗೂ ಧಾರ್ಮಿಕ ನಂಬಿಕೆಯಲ್ಲ. ಮಂಗಳಸೂತ್ರ ಎನ್ನುವುದು ಧಾರ್ಮಿಕ ನಂಬಿಕೆ" ಎಂದು ಹೇಳಿದರು.
ಇದಕ್ಕೆ ಕಾಮತ್, ಮೂಗುತಿ ಧಾರ್ಮಿಕ ನಂಬಿಕೆ ಎನ್ನುವುದಕ್ಕೆ ನನ್ನಲ್ಲಿ ಹಲವು ಸಾಕ್ಷಿಗಳಿವೆ ಎಂದು ಹೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಗುಪ್ತಾ ಅವರು, ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮಾತ್ರ ಈ ಸಂಪ್ರದಾಯವಿಲ್ಲ. ಇದು ಎಂದಿಗೂ ಧಾರ್ಮಿಕ ಆಚರಣೆಯಲ್ಲ ಎಂದರು.
PublicNext
08/09/2022 08:38 am