ಬೆಂಗಳೂರು : ಅಪರಾಧ ಪ್ರಕರಣಗಳ ಸಂಬಂಧ ಎಲ್ಲಾ ಸಂದರ್ಭದಲ್ಲೂ ಶೋಧನಾ ವಾರೆಂಟ್ (ಸರ್ಚ್ ವಾರೆಂಟ್) ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ತಮ್ಮ ಪಕ್ಷದ ಕಚೇರಿಯನ್ನು ಶೋಧ ನಡೆಸಲು ವಾರೆಂಟ್ ಜಾರಿ ಮಾಡಿದ್ದ ನಗರದ 44ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರು, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 93(1)(ಎ) ಪ್ರಕಾರ ಶೋಧ ವಾರೆಂಟ್ ಜಾರಿ ಮಾಡುವ ಮುನ್ನ ಸಮನ್ಸ್ ನೀಡಬೇಕಾಗುತ್ತದೆ. ಆದರೆ, ಸೆಕ್ಷನ್ 93(1)(ಸಿ) ಪ್ರಕಾರ ಸಮನ್ಸ್ ನೀಡದೆ ಶೋಧ ನಡೆಸಲು ವಾರೆಂಟ್ ಜಾರಿಗೊಳಿಸಬಹುದು. ಅದರಂತೆ ಅಪರಾಧ ಪ್ರಕರಣಗಳ ಸಂಬಂಧ ಎಲ್ಲಾ ಸಂದರ್ಭದಲ್ಲೂ ಶೋಧನಾ ವಾರೆಂಟ್ ಜಾರಿಗೊಳಿಸುವ ಮುನ್ನ ಸಮನ್ಸ್ ನೀಡುವ ಅವಶ್ಯಕತೆ ಇಲ್ಲ. ವಿಚಾರಣಾ ನ್ಯಾಯಾಲಯಗಳು ಸಂದರ್ಭಕ್ಕೆ ಅನುಸಾರವಾಗಿ ಶೋಧನಾ ವಾರೆಂಟ್ ಜಾರಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
21/01/2021 10:07 am