ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

KCET | ಸಿಇಟಿ ಗೊಂದಲ ಇತ್ಯರ್ಥ: 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್ ಕಟ್

ಬೆಂಗಳೂರು: ಸಿಇಟಿ ಫಲಿತಾಂಶ ( CET Results) ಪ್ರಕಟವಾದ ಒಂದೂವರೆ ತಿಂಗಳ ನಂತರ ಕೊನೆಗೂ ಸಿಇಟಿ ರ‍್ಯಾಂಕಿಂಗ್ ಗೊಂದಲಕ್ಕೆ ಪರಿಹಾರ ಸಿಕ್ಕಂತಾಗಿದೆ.

2021ನೇ ಸಾಲಿನ ಪಿಯುಸಿ ( PUC ) ವಿದ್ಯಾರ್ಥಿಗಳ 18 ಅಂಕ ಕಡಿತಗೊಳಿಸಿ, 2022ನೇ ಸಾಲಿನ ಹೊಸ ರ‍್ಯಾಂಕ್ ಪಟ್ಟಿ ಪ್ರಕಟಿಸಬಹುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ನೇತೃತ್ವದ ಸಮಿತಿ ಸಲಹೆ ನೀಡಿದ್ದು, ಹೈಕೋರ್ಟ್ ಇದನ್ನು ಮಾನ್ಯ ಮಾಡಿದೆ. ಜತೆಗೆ, ಇದೇ ವಿಧಾನ ಅಳವಡಿಸಿಕೊಂಡು ಹೊಸದಾಗಿ ಸಿಇಟಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಶುಕ್ರವಾರ ಸರಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಆದೇಶಿಸಿತು. ಈ ಸಲಹೆಗೆ ಸರಕಾರವೂ ಒಪ್ಪಿಗೆ ಸೂಚಿಸಿದ ಬೆನ್ನಲ್ಲಿಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ), ಸೆ.29ರಂದು ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿ, ಅ.3ರಿಂದಲೇ ಕೌನ್ಸೆಲಿಂಗ್ ನಡೆಸುವುದಾಗಿ ಘೋಷಿಸಿತು.

ವಿವಾದ ಏನು?

ಜು.30ರಂದು ಉನ್ನತ ಶಿಕ್ಷಣ ಇಲಾಖೆಯು ಸಿಇಟಿ-2022ರ ಫಲಿತಾಂಶವನ್ನು ಪ್ರಕಟ ಮಾಡಿತ್ತು. ಪಿಯು ಪುನರಾವರ್ತಿತ ವಿದ್ಯಾರ್ಥಿಗಳು ಸಿಇಟಿಗೆ ತಮ್ಮ ಪಿಯು ಅಂಕಗಳನ್ನು ಪರಿಗಣಿಸಿಲ್ಲಎಂಬ ಕಾರಣಕ್ಕೆ ಹೈಕೋರ್ಟ್ ಮೆಟ್ಟಲೇರಿದ್ದರು. ಕೋರ್ಟ್ ಸೆ.3ರಂದು ತೀರ್ಪು ಪ್ರಕಟಿಸಿತ್ತು. ಹೊಸದಾಗಿ ರ‍್ಯಾಂಕ್ ಪಟ್ಟಿ ಪ್ರಕಟಿಸುವಂತೆ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಹಂಗಾಮಿ ಸಿಜೆ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ಸರಕಾರದ ಪರ ವಾದಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿಉನ್ನತ ಶಿಕ್ಷಣ ಪರಿಷತ್ನ ಉಪಾಧ್ಯಕ್ಷ ಬಿ.ತಿಮ್ಮೇಗೌಡ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿರುವ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸಿಇಟಿ ರ‍್ಯಾಂಕಿಂಗ್ ವಿಚಾರದಲ್ಲಿಎದುರಾಗಿರುವ ಸಮಸ್ಯೆ ಪರಿಹರಿಸಲು ಅಗತ್ಯವಾದ ಸಮನ್ವಯ ಸೂತ್ರವೊಂದನ್ನು ರೂಪಿಸಲಾಗಿದೆ ಎಂದರು.

ಸಮಿತಿ ಸೂಚಿಸಿರುವ ವಿಧಾನಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪರ ವಕೀಲರೂ ಸಮ್ಮತಿಸಿದರು. ಅದನ್ನು ಪರಿಗಣಿಸಿದ ಪೀಠ, ಸಮಿತಿ ಸೂಚಿಸಿರುವ ವಿಧಾನವನ್ನು ಅಳವಡಿಸಿಕೊಂಡು, ಹೊಸದಾಗಿ ಸಿಇಟಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸುವಂತೆ ಸೂಚಿಸಿ, ಮೇಲ್ಮನವಿಯನ್ನು ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ:

2020-21ನೇ ಸಾಲಿನ ಪಿಯುಸಿ ಅಂಕಗಳನ್ನು 2022ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜು.30ರಂದು ಹೊರಡಿಸಿದ್ದ ಟಿಪ್ಪಣಿ ಪ್ರಶ್ನಿಸಿ 40ಕ್ಕೂ ಅಧಿಕ ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಗಳನ್ನು ಸೆ.3ರಂದು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ, ಕೆಇಎ ಹೊರಡಿಸಿದ್ದ ಟಿಪ್ಪಣಿ ರದ್ದುಪಡಿಸಿತ್ತಲ್ಲದೆ, ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿಯ ಶೇ.50 ಅಂಕ ಹಾಗೂ ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರಾರ‍ಯಂಕ್ ಪಟ್ಟಿ ಪ್ರಕಟಿಸುವಂತೆ ಪ್ರಾಧಿಕಾರಕ್ಕೆ ಆದೇಶಿಸಿತ್ತು. ಈ ತೀರ್ಪು ರದ್ದು ಕೋರಿ ಸರಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಬಿಕ್ಕಟ್ಟು ಪರಿಹಾರ ಹೇಗೆ?

1. 2021ನೇ ಸಾಲಿನ ಪಿಯು ವಿದ್ಯಾರ್ಥಿಗಳಿಗೆ 3 ವಿಷಯಗಳಿಂದ ಒಟ್ಟು 18 ಅಂಕಗಳನ್ನು ಕಡಿತಗೊಳಿಸಿ ಸಾಮಾನ್ಯೀಕರಿಸಬೇಕು.

ಭೌತಶಾಸ್ತ್ರದ ಸರಾಸರಿ 6 ಅಂಕ, ರಸಾಯನ ಶಾಸ್ತ್ರದ 5 ಅಂಕ ಹಾಗೂ ಗಣಿತದ 7 ಅಂಕಗಳನ್ನು ಕಡಿತಗೊಳಿಸಬೇಕು. ಆಗ 100 ಅರ್ಹತಾ ಅಂಕಗಳಿಗೆ 6 ಅಂಕ ಕಡಿಮೆಯಾಗುತ್ತದೆ.

2. ಇದಾದ ಬಳಿಕ 2021ನೇ ಸಾಲಿನ ವಿದ್ಯಾರ್ಥಿಗಳ ಒಟ್ಟು ಪಿಯು ಅಂಕಗಳ ಶೇ. 50 ಹಾಗೂ 2022ರ ಸಿಇಟಿಯಲ್ಲಿ ಪಡೆದ ಶೇ. 50 ಅಂಕ ಪರಿಗಣಿಸಿ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಬೇಕು.

3. ಇದರಿಂದ ಕೋವಿಡ್ ನಂತರದ ಬ್ಯಾಚ್‌'ನ ವಿದ್ಯಾರ್ಥಿಗಳ ರ‍್ಯಾಂಕಿಂಗ್ ಮೇಲೆ ಕೊಂಚಮಟ್ಟಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿರಿಸಿಕೊಂಡು ಕಾಲೇಜುಗಳಲ್ಲಿ ಐಟಿ ಸಂಬಂಧಿತ ವಿಭಾಗದಲ್ಲಿ ಕಳೆದ ಸಾಲಿನಲ್ಲಿದ್ದ ಸೀಟುಗಳ ಸಂಖ್ಯೆಯನ್ನು ಈ ವರ್ಷ ಶೇ.10 ಹೆಚ್ಚಳ ಮಾಡಬಹುದು.

* ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿರುವುದನ್ನು ನಾವು ಸ್ವಾಗತಿಸುತ್ತೇವೆ.

Edited By : Vijay Kumar
PublicNext

PublicNext

24/09/2022 07:30 am

Cinque Terre

72.93 K

Cinque Terre

1

ಸಂಬಂಧಿತ ಸುದ್ದಿ