ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಅನೇಕ ಗ್ರಾಮಗಳ ರೈತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ ತಹಶೀಲ್ದಾರ ಕಚೇರಿಯವರೆಗೆ ರೈತರು ರ‍್ಯಾಲಿ ನಡೆಸಿ ಭಾರತೀಯ ಕಿಸಾನ್ ಸಂಘ ಲಕ್ಷ್ಮೇಶ್ವರ ತಾಲೂಕ ಘಟಕದ ವತಿಯಿಂದ ರೈತರು ತಹಶೀಲ್ದಾರ ಪರಸುರಾಮ ಸತ್ತಿಗೇರಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸತತ ಮಳೆಯಿಂದಾಗಿ ಅತಿವೃಷ್ಟಿಗೆ ರೈತರ ಬೆಳೆಗಳು ಹಾಳಾಗಿವೆ. ಅಕ್ಕಪಕ್ಕದ ಗ್ರಾಮಗಳ ರೈತರ ಕೃಷಿ ಭೂಮಿಗಳಲ್ಲಿದ್ದ ಮೆಕ್ಕೆಜೋಳ, ಶೇಂಗಾ, ಹೆಸರು, ಮೆಣಸಿನಗಿಡ, ಬಿ.ಟಿ ಹತ್ತಿ, ಉಳ್ಳಾಗಡ್ಡಿ ಹಾಗೂ ಸೇರಿದಂತೆ ಮುಂಗಾರು ಹಂಗಾಮು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಎಕರೆಯೊಂದಕ್ಕೆ 25 ಸಾವಿರ ರೂ. ಖರ್ಚು ಮಾಡಲಾಗಿದೆ. ಹಾನಿಯಾದ ಕೃಷಿ ಪ್ರದೇಶಕ್ಕೆ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.
2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವಂತಹ ಅನೇಕ ರೈತರ ಬೆಳೆಗಳು ಅತಿವೃಷ್ಟಿ ಮಳೆಯಿಂದಾಗಿ ಹಾಳಾಗಿದ್ದು ರೈತ ಸಮೂಹ ತುಂಬಾ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆಯಿಂದ ಇಲ್ಲಿಯವರೆಗೂ ರೈತರು ಬೀಜ, ಸರಕಾರಿ ಗೊಬ್ಬರ, ಕೀಟನಾಶಕ ಔಷಧಿ ಇವುಗಳ ಖರೀದಿಗೆ ಹಾಗೂ ಕೃಷಿ ಚಟುವಟಿಗಳಿಗೆ ರೈತರು ಸಾಕಷ್ಟು ಖರ್ಚು ಮಾಡಿರುತ್ತಾರೆ.
ಬೆಳೆ ಹಾನಿಯಾಗಿದ್ದರಿಂದ ರಾಜ್ಯದ ಲಕ್ಷ್ಮೇಶ್ವರ ತಾಲೂಕಿನ ರೈತರು ಸೇರಿದಂತೆ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಮುಂದಿನ ಚಟುವಟಿಕೆಗಳಿಗೆ , ಜೀವನ ನಡೆಸುವದಕ್ಕೆ, ಮಕ್ಕಳ ಶಾಲಾ ಕಾಲೇಜುಗಳಿಗೆ ಶುಲ್ಕ ತುಂಬಲು ಹಣವಿಲ್ಲದೇ ಪರದಾಡುವಂತಾಗಿದೆ.
ಸರಕಾರ ಈ ಕೂಡಲೇ ಹಾನಿಗೊಳಗಾದ ಪ್ರತಿಯೊಬ್ಬ ರೈತರಿಗೆ ಪರಿಹಾರ ನೀಡಬೇಕು, ನೇರವಾಗಿ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
PublicNext
09/08/2022 04:35 pm