ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.15ರಂದು 'ಸೇನಾ ದಿನ'ವನ್ನು ಯಾಕೆ ಆಚರಿಸುತ್ತಾರೆ, ಇತಿಹಾಸವೇನು? ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಪ್ರತಿ ವರ್ಷ ಜನವರಿ 15ರಂದು ಅತ್ಯಂತ ಉತ್ಸಾಹದಿಂದ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಯೋಧರಿಗೆ ಗೌರವ ಸಮರ್ಪಿಸಲಾಗುತ್ತದೆ. ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತದೆ.

ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೊಡಂಡೇರ ಮಾದಪ್ಪ ಕಾರಿಯಪ್ಪ (ಕೆ. ಎಂ. ಕಾರಿಯಪ್ಪ) ಅವರನ್ನು ಸ್ಮರಿಸಿ ಈ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ದೆಹಲಿಯ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಮಿಲಿಟರಿ ಪರೇಡ್ ಮತ್ತು ಇತರ ಅನೇಕ ಸಮರ ಪ್ರದರ್ಶನಗಳನ್ನು ನಡೆಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. 2022ರಲ್ಲಿ 74ನೇ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತಿದ್ದು, ಭಾರತೀಯ ಸೇನೆಯ ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸಲಾಗುತ್ತಿದೆ.

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿದ್ದು, ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಆದರೆ 1949ರ ಜನವರಿ 15ರಂದು ಮೊದಲ ಬಾರಿಗೆ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಕೆ. ಎಂ.ಕಾರ್ಯಪ್ಪ ಅಧಿಕಾರ ವಹಿಸಿಕೊಂಡರು. ಅಂದು ಫ್ರಾನ್ಸಿಸ್ ಬಟ್ಚರ್ ಕೆ ಎಂ ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ರಿಟಿಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರವಾದ ದಿನವು ಭಾರತೀಯ ಇತಿಹಾಸದಲ್ಲಿ ಮಹತ್ವ ಪಡೆದುಕೊಂಡಿದ್ದು, ಇದರ ಜ್ಞಾಪಕಾರ್ಥವಾಗಿ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ದಿನದಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.

ಭಾರತೀಯ ಸೇನಾ ದಿನವನ್ನು ಹೇಗೆ ಆಚರಿಸಲಾಗುತ್ತದೆ?:

ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ 'ಅಮರ್ ಜವಾನ್' ಸ್ಮಾರಕದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗುತ್ತದೆ. ಗೌರವದ ನಂತರ, ಮಿಲಿಟರಿ ಪ್ರದರ್ಶನಗಳೊಂದಿಗೆ ಭವ್ಯವಾದ ಮೆರವಣಿಗೆಯಲ್ಲಿ ಭಾರತೀಯ ಸೇನೆಯ ಆಧುನಿಕ ತಂತ್ರಜ್ಞಾನ ಮತ್ತು ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ದಿನದಂದು ಸೇನಾ ಪದಕಗಳಂತಹ ಶೌರ್ಯ ಗೌರವಗಳನ್ನು ನೀಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸದಸ್ಯರು ಶೌರ್ಯ ಮತ್ತು ಹೆಚ್ಚು ಗೌರವಾನ್ವಿತ ಸೇವಾ ಪದಕಗಳನ್ನು ಪಡೆಯುತ್ತಾರೆ.

Edited By : Vijay Kumar
PublicNext

PublicNext

15/01/2022 01:59 pm

Cinque Terre

36.39 K

Cinque Terre

2

ಸಂಬಂಧಿತ ಸುದ್ದಿ