ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಶಾಲಾ ಪರಿಷ್ಕೃತ ಪಠ್ಯಪುಸ್ತಕ ವಿವಾದ ಇನ್ನೂ ಮಾಸಿಲ್ಲ. ಈ ಮಧ್ಯೆ ಪಠ್ಯಪುಸ್ತಕ ವಿರೋಧಿಸಿ ಮತ್ತು ಪಠ್ಯ ವಾಪಸ್ ಪಡೆಯುವಂತೆ ಪತ್ರ ಬರೆದಿದ್ದ ಸಾಹಿತಿಗಳ ಹಿನ್ನೆಲೆ ಕುರಿತು ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಗುಪ್ತಚರ ಇಲಾಖೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ಬಲಪಂಥೀಯ ಧೋರಣೆ ಅಂಶಗಳಿರುವ ಪಠ್ಯದ ವಿರುದ್ಧ ಸಾಹಿತಿ ವಲಯ ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ಕೇಳಿಬಂದಿತ್ತು. ವಿವಾದ ತಣ್ಣಗಾಗಿಸಲು ಸಿಎಂ ಬೊಮಾಯ್ಮಿ ಮಧ್ಯೆ ಪ್ರವೇಶಿಸಿ ಸಮಿತಿಯನ್ನು ವಿಸರ್ಜನೆಗೊಳಿಸಿ ಭುಗಿಲೆದಿದ್ದ ಸಮರಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೂ ಕೈಹಾಕಿದ್ದರು. ಇದೀಗ ಗುಪ್ತಚರ ಇಲಾಖೆ ಮೂಲಕ ಪರಿಷ್ಕೃತ ಪಠ್ಯ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಹಿನ್ನೆಲೆ, ವೈಯಕ್ತಿಕ ವಿವರ, ಅವರ ಸಿದ್ದಾಂತ ಕುರಿತು ಮಾಹಿತಿ ಕಲೆ ಹಾಕುವಂತೆ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎನ್ನಲಾಗಿದೆ. ಸದ್ಯ ಈ ಬೆಳವಣಿಗೆಯೂ ಮುಂದಿನ ದಿನಗಳಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಡುವ ಎಲ್ಲಾ ಲಕ್ಷಣ ಕಾಣುತ್ತಿದೆ.
PublicNext
07/06/2022 04:18 pm