ನವದೆಹಲಿ: ಡ್ರಗ್ಸ್ ದಂಧೆ ಪ್ರಕರಣದ ವರದಿ ಪ್ರಸಾರದ ಭರಾಟೆಯಲ್ಲಿ ಬಾಲಿವುಡ್ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿವೆ ಎಂದು ಬಾಲಿವುಡ್ ಚಿತ್ರರಂಗವು ಆರೋಪಿಸಿದೆ. ಈ ಸಂಬಂಧ ರಿಪಬ್ಲಿಕ್ ಮತ್ತು ಟೈಮ್ಸ್ ನೌ ಸೇರಿದಂತೆ ಹಲವು ಸುದ್ದಿವಾಹಿನಿಗಳ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಆಮಿರ್ ಖಾನ್, ಶಾರುಕ್ ಖಾನ್, ಯಶ್ ರಾಜ್ ಹಾಗೂ ಕರಣ್ ಜೋಹರ್ ಸೇರಿದಂತೆ 34 ಬಾಲಿವುಡ್ ನಿರ್ಮಾಪಕರು ಮತ್ತು ನಾಲ್ಕು ಚಿತ್ರೋದ್ಯಮ ಸಂಘಟನೆಗಳು ರಿಪ್ಲಬಿಕ್ ಟಿವಿ ಮತ್ತು ಟೈಮ್ಸ್ ನೌ ವಿರುದ್ಧ ಪ್ರಕರಣ ದಾಖಲಿಸಿವೆ. ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ, ವರದಿಗಾರ ಪ್ರದೀಪ್ ಭಂಡಾರಿ ಮತ್ತು ಟೈಮ್ಸ್ ನೌನ ಪತ್ರಕರ್ತರಾದ ರಾಹುಲ್ ಶಿವಶಂಕರ್ ಹಾಗೂ ನವಿಕಾ ಕುಮಾರ್ ಅವರಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಕ್ಕೆ ಮನವಿ ಮಾಡಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆ ಚಲನಚಿತ್ರೋದ್ಯಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗುತ್ತಿದೆ. ಬಾಲಿವುಡ್ ಬಗ್ಗೆ "ಕೊಳಕು", "ಹೊಲಸು", "ಕಲ್ಮಷ", "ಇದು ದೇಶದ ಅತ್ಯಂತ ಕೊಳಕು ಉದ್ಯಮ" ಹಾಗೂ "ಕೊಕೇನ್ ಮತ್ತು ಎಲ್ಎಸ್‌ಡಿ ಯಲ್ಲೇ ಮಿಂದೆದ್ದಿದೆ" ಎನ್ನುವ ಪದಗಳ ಬಳಕೆ ಸೂಕ್ತವಲ್ಲ ಎಂದು ನಿರ್ಮಾಪಕರು ಮೊಕದ್ದಮೆಯಲ್ಲಿ ಆಕ್ಷೇಪಿಸಿದ್ದಾರೆ.
PublicNext
12/10/2020 07:49 pm