ಕೂದಲುಗಳನ್ನು ಕಪ್ಪಗಾಗಿಸುವ ಡೈ ಅಥವಾ ಕೃತಕ ಬಣ್ಣಗಳ ಬಳಕೆ ಪುರುಷ, ಮಹಿಳೆಯರಿಗೆ ಅಭ್ಯಾಸವಾಗಿದೆ.
ಕೂದಲ ಬಣ್ಣವನ್ನು ಬದಲಿಸಿಕೊಳ್ಳಲೂ ವಿಭಿನ್ನ ಬಣ್ಣಗಳ ಡೈಗಳನ್ನೂ ಯುವಜನರು ಬಳಸುತ್ತಿದ್ದಾರೆ.
ಕೂದಲನ್ನು ಹೊಳಪುಳ್ಳ ಬಣ್ಣದ್ದಾಗಿಸುವುದು ಹಾಗೂ ಎಲ್ಲರ ಆಕರ್ಷಣೆಯನ್ನು ಬಯಸುವುದು ಇಂದಿನ ದಿನಗಳಲ್ಲಿ ಫ್ಯಾಶನ್ ಎಂಬಂತಾಗಿದೆ.
ಮದ್ರಾಸ್ ಕಣ್ಣು (Conjunctivitis)
ಕೂದಲ ಬಣ್ಣಗಳನ್ನು ಹಚ್ಚಿಕೊಳ್ಳುವಾಗ ಅತೀವವಾದ ಎಚ್ಚರಿಕೆ ಅಗತ್ಯ. ಕೊಂಚ ಎಚ್ಚರ ತಪ್ಪಿದರೂ ಇದರಿಂದ ಸಿಡಿಯುವ ಚಿಕ್ಕ ಹನಿ ಕಣ್ಣಿಗೆ ಬಿದ್ದರೂ ಭಾರೀ ಉರಿ ಎದುರಾಗಬಹುದು.
ಇದರಲ್ಲಿರುವ ರಾಸಾಯನಿಕಗಳು ಅತಿ ಪ್ರಬಲವಾಗಿದ್ದು ಕಣ್ಣಿನಂತಹ ಸೂಕ್ಷ್ಮ ಭಾಗಕ್ಕೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಅಕಸ್ಮಾತ್ ಅತಿ ಚಿಕ್ಕ ಹಸಿ ಕಣ್ಣಿಗೆ ಬಿದ್ದರೂ ಇದರಿಂದ ಕಣ್ಣು ಉರಿ ಮತ್ತು ಮದ್ರಾಸ್ ಐ (ಕಂಜಂಕ್ಟಿವೈಟಿಸ್) ಎಂಬ ಕಣ್ಣಿನ ಕಾಯಿಲೆ ಎದುರಾಗಬಹುದು.
ಅಲರ್ಜಿಕಾರಕ ಪರಿಣಾಮ
ಡೈ ಉಪಯೋಗಿಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಯೇ ಮುಂದುವರೆಯುವುದು ಅವಶ್ಯ. ಏಕೆಂದರೆ ಬಹುತೇಕ ಕೂದಲ ಬಣ್ಣಗಳಲ್ಲಿ ಪ್ಯಾರಾಫೆನಿಲ್ಡಿಯಾಮೈನ್ (paraphenyldiamine) ಎಂಬ ರಾಸಾಯನಿಕ ಇರುತ್ತದೆ. ಇದು ಹಲವರಿಗೆ ಅಲರ್ಜಿಕಾರಕ (allergen) ಎಂದು ಈಗಾಗಲೇ ಸಾಬೀತುಗೊಂಡಿದೆ. (ಹೀಗಿರುವುದಕ್ಕೇ ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ.
ಅಸ್ತಮಾ
ಕೂದಲ ಬಣ್ಣದಿಂದ ಎದುರಾಗುವ ಭಾರೀ ಅಲರ್ಜಿಕಾರಕ ಪರಿಣಾಮದಲ್ಲಿ ಅಸ್ತಮಾವೂ ಒಂದು.
ಈ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಗಾಳಿಗೆ ತೆರೆದ ಕ್ಷಣದಿಂದ ಆವಿಯಾಗಿ ಗಾಳಿಯಲ್ಲಿ ಹರಡತೊಡಗುತ್ತವೆ.
ಈ ಗಾಳಿಯನ್ನು ಉಸಿರಿನಿಂದ ಎಳೆದುಕೊಂಡಾಗ ಮೂಗಿನ ಒಳಭಾಗ, ಗಂಟಲು, ಶ್ವಾಸಕೋಶ ಮೊದಲಾದ ಸೂಕ್ಷ್ಮ ಅಂಗಗಳು ಪ್ರತಿಕ್ರಿಯೆಗೆ ಒಳಗಾಗಬಹುದು.
ಪರಿಣಾಮವಾಗಿ ಸತತವಾದ ಕೆಮ್ಮು, ಉಸಿರು ಎಳೆದುಕೊಳ್ಳಲು ಕಷ್ಟವಾಗುವುದು, ಶ್ವಾಸಕೋಶದ ಸೋಂಕು, ಗಂಟಲ ಬೇನೆ ಮತ್ತು ಅಸ್ತಮಾಘಾತ (asthma attack) ಸಹಾ ಎದುರಾಗಬಹುದು.
ಗರ್ಭಾವಸ್ಥೆಯ ಮೇಲೆ ಎದುರಾಗುವ ಪರಿಣಾಮ
ಕೂದಲಿಗೆ ಬಣ್ಣ ಹಾಕುವ ಪ್ರಯತ್ನಗಳು ಗರ್ಭಿಣಿ ಮಹಿಳೆಯರ ಹುಟ್ಟಲಿರುವ ಮಗುವಿಗೂ ಹಾನಿಕಾರಕವಾಗಬಹುದು ಏಕೆಂದರೆ ಇದು ಭ್ರೂಣದಲ್ಲಿ ಅನಪೇಕ್ಷಿತ ಜೀವಕೋಶಗಳ ಬೆಳವಣಿಗೆಗೆ (malignancy) ಕಾರಣವಾಗಬಹುದು.
ಗರ್ಭಾವಸ್ಥೆಯಲ್ಲಿ ಕೂದಲಿಗೆ ಬಣ್ಣ ಹಾಕಲೇಬಾರದು ಎಂದು ವೈದ್ಯರು ವಿಶೇಷವಾಗಿ ಸಲಹೆ ನೀಡುವುದು ಇದೇ ಕಾರಣಕ್ಕೆ. ಕೂದಲ ಬಣ್ಣದ ರಾಸಾಯನಿಕಗಳು ನಿಮಗೂ ನಿಮ್ಮ ಮಗುವಿಗೂ ಅಪಾಯ ಉಂಟು ಮಾಡಬಹುದು.
ಕೂದಲು ಉದುರಬಹುದು
ನಮ್ಮ ಕೂದಲ ಬುಡಗಳು ದೃಢವಾಗಿದ್ದಷ್ಟೂ ಕೂದಲು ಉದುರುವುದಿಲ್ಲ. ಆದರೆ ಈ ಬಣ್ಣಗಳಲ್ಲಿರುವ ಪ್ರಬಲ ರಾಸಾಯನಿಕಗಳು, ವಿಶೇಷವಾಗಿ ಅಮೋನಿಯಾ ಮತ್ತು ಪೆರಾಕ್ಸೈಡ್ (Ammonia and peroxide) ಗಳು ಕೂದಲ ಬುಡಕ್ಕೆ ಹೋದರೆ ಬುಡವನ್ನು ಸಡಿಲಗೊಳಿಸಬಹುದು.
ಇದೇ ಕಾರಣಕ್ಕೆ ವೃತ್ತಿಪರ ಸೌಂದರ್ಯ ತಜ್ಞರು ಕೂದಲ ಬಣ್ಣವನ್ನು ಹಚ್ಚುವಾಗ ಕೂದಲ ಬುಡಕ್ಕೆ ಈ ಬಣ್ಣ ತಗಲದಂತೆ ಎಚ್ಚರಿಕೆಯನ್ನು ವಹಿಸುತ್ತಾರೆ.
ಕೂದಲನ್ನು ಡೈ ಮಾಡುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆಗಳು
* ಶಾಶ್ವತ ಕೂದಲು ಬಣ್ಣದ ಬಳಕೆಯನ್ನು ಆದಷ್ಟೂ ತಪ್ಪಿಸಿ. ಇವು ಅತಿ ಪ್ರಬಲ ರಾಸಾಯನಿಕಗಳಾಗಿದ್ದು ಹೆಚ್ಚು ಹಾನಿಕರವಾಗಿವೆ.
* ಮದರಂಗಿ, ಬೀಟ್ರೂಟ್ ಜ್ಯೂಸ್ ಮುಂತಾದ ಪರ್ಯಾಯಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಿ
* ವಿವಿಧ ಉತ್ಪನ್ನಗಳು ಮತ್ತು ಬ್ರಾಂಡ್ಗಳಲ್ಲಿರುವ ರಾಸಾಯನಿಕಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಿರಿ. ಆ ಬಳಿಕವೇ ಡೈ ಮಾಡಿಕೊಳ್ಳಬಹುದೇ ಎಂಬುದನ್ನು ನಿರ್ಧರಿಸಿ.
* ಮನೆಯಲ್ಲಿ ಡೈ ಮಾಡಬೇಡಿ. ಬದಲಿಗೆ ವೃತ್ತಿಪರರ ಸೇವೆಯನ್ನು ಪಡೆಯಿರಿ.
ಇವು ಕೂದಲ ಡೈಗಳನ್ನು ಬಳಸುವುದರಿಂದ ಎದುರಾಗುವ ಕೆಲವು ಪ್ರಮುಖ ಅಡ್ಡಪರಿಣಾಮಗಳಾಗಿವೆ.
ಕೂದಲ ಡೈ ಗಳಿಂದ ಕ್ಯಾನ್ಸರ್ ಸಹಾ ಒಂದು ಎಂದು ಕೆಲವು ಹಿಂದಿನ ಅಧ್ಯಯನಗಳು ತಿಳಿಸಿವೆ.
PublicNext
31/10/2020 03:46 pm