ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮವು ಕಂದಾಯ ಗ್ರಾಮವಾಗಿದ್ದರೂ ಸಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 25 ಮನೆ 150 ಕ್ಕೂ ಹೆಚ್ಚು ಜನಸಂಖ್ಯೆ, 120 ಮತದಾನದ ಹಕ್ಕನ್ನು ಹೊಂದಿರುವ ಮತದಾರರಿರುವ ಈ ಗ್ರಾಮಕ್ಕೆ ರಸ್ತೆಯೇ ಇಲ್ಲ.
ಕೊರಟಗೆರೆ ಕಂದಾಯ ಗ್ರಾಮದ ಕುಮಟೇನ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದರೂ ಇಲ್ಲದಂತೆ ಮಾಯವಾಗಿದೆ. ಕಳೆದ 7 ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಜೊತೆಗೆ ಮುಖ್ಯವಾಗಿ ಸಂಪರ್ಕ ರಸ್ತೆ ಇಲ್ಲದೇ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ.
ಬೆಂಡೋಣೆ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಸಂಪರ್ಕ ರಸ್ತೆ ಇಲ್ಲದೇ ಪರಿತಪಿಸುತ್ತಿದ್ದಾರೆ. 7 ವರ್ಷಗಳಿದಿಂದಲೂ ಸತತವಾದ ಹೋರಾಟವನ್ನು ಈ ಊರಿನ ಗ್ರಾಮಸ್ಥರು ಮಾಡುತ್ತಿದ್ದಾರೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಸಮಸ್ಯೆಯಿಂದ ಶಾಲಾ ಮಕ್ಕಳು ಶಾಲೆಗೆ ಹೋಗಲು ಆಗದೆ, ಮನೆಯಲ್ಲೇ ಉಳಿಯುತ್ತಿದ್ದಾರೆ. ವೃದ್ಧರು, ವಿಕಲಾಂಗರು, ಪುಟ್ಟ ಮಕ್ಕಳು ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದರೆ ಹರಿಯುವ ಹಳ್ಳದ ಮಧ್ಯೆಯೇ ಜೀವದ ಹಂಗನ್ನು ತೊರೆದು ಓಡಾಡಬೇಕಾದ ಅನಿವಾರ್ಯ ಇದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಚುನಾವಣೆ ಸಮಯದಲ್ಲಿ ಮಾತ್ರ ನಮ್ಮೂರಿಗೆ ಭೇಟಿ ನೀಡಿ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆಂದು ಆಶ್ವಾಸನೆ ಮಾತ್ರ ನೀಡಿ ಹಿಂತಿರುಗಿದ ಮಾಜಿ ಡಿಸಿಎಂ ಆದ, ಹಾಲಿ ಶಾಸಕ ಡಾ ಜಿ ಪರಮೇಶ್ವರ್ ಇಲ್ಲಿಯವರೆಗೂ ಕೂಡ ನಮ್ಮ ಗ್ರಾಮಕ್ಕೆ ಬಂದಿಲ್ಲ. ನಮ್ಮ ಕಷ್ಟಗಳನ್ನು ಕೇಳಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ
PublicNext
31/08/2022 08:22 am