ಬೆಂಗಳೂರು: ಈ ಬಾರಿ ವರುಣನ ರೌದ್ರಾವತಾರಕ್ಕೆ ದೇಶ-ವಿದೇಶಗಳ ಹಲವು ಪ್ರದೇಶಗಳು ನಲುಗಿ ಹೋಗಿವೆ. ಕರ್ನಾಟಕದಲ್ಲೂ ಈ ಬಾರಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಅದರಲ್ಲಿಯೂ ಬೆಂಗಳೂರು ಕೂಡ ಭೀಕರ ಪರಿಣಾಮವನ್ನು ಈ ಬಾರಿ ಕಂಡಿದೆ. ಇದಕ್ಕೆ ಮೂಲ ಕಾರಣ ಬೆನ್ನತ್ತಿ ಹೋದಾಗ ಸಿಕ್ಕಿದ್ದು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಹಲವು ಬಹುಮಹಡಿ ಕಟ್ಟಡ ನಿರ್ಮಾಣ.
ಈ ಹಿಂದೆ ಕೂಡ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆದಿದ್ದರೂ, ಒತ್ತುವರಿ ತೆರವುಗೊಳಿಸುವಂತೆ ಖುದ್ದು ನ್ಯಾಯಾಲಯವೇ ಸೂಚಿಸಿದ್ದರೂ ಆ ಬಗ್ಗೆ ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಂಡಿರಲಿಲ್ಲ. ಆದ್ರೆ ಈ ಬಾರಿ ಮಾತ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಜಕಾಲುವೆ ಒತ್ತುವರಿ ಕಟ್ಟಡಗಳ ತೆರವಿನ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಕಟ್ಟಡ ತೆರವುಗೊಳಿಸುವಂತೆ ಇದಾಗಲೇ ನೋಟಿಸ್ ನೀಡಲಾಗಿದೆ. ಇದರಿಂದ ಹೌಹಾರಿರುವ ಕಟ್ಟಡಗಳ ಮಾಲೀಕರು ಅತ್ತು-ಕರೆದು ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಕಟ್ಟಡ ನೆಲಸಮ ಕಾರ್ಯದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿನ ಕಟ್ಟಡ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಸಿಎಂ, 'ಮಳೆಯಿಂದ ವಿಪರೀತ ತೊಂದರೆ ಆಗಿದೆ. ಆದ್ದರಿಂದ ಇನ್ನು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಎಷ್ಟೇ ದೊಡ್ಡವರಿದ್ದರೂ ಯಾವ ಮಾತನ್ನೂ ಕೇಳಿಸಿಕೊಳ್ಳದೇ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತೇವೆ. ಇದಾಗಲೇ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ' ಎಂದಿದ್ದಾರೆ.
'ಒತ್ತುವರಿಗೆ ಸಂಬಂಧಿಸಿದಂತೆ ಕೋರ್ಟ್ಗಳಲ್ಲಿ ಕೆಲವು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಆದರೆ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಇದಾಗಲೇ ಖುದ್ದು ಕೋರ್ಟ್ ಆದೇಶಿಸಿದೆ. ಆದ್ದರಿಂದ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವವರ ಪರವಾಗಿ ಕೋರ್ಟ್ ಆದೇಶ ಹೊರಡಿಸುವುದಿಲ್ಲ, ನಾವು ತೆರವು ಕಾರ್ಯವನ್ನು ಮುಂದುವರೆಸುತ್ತೇವೆ' ಎಂದಿದ್ದಾರೆ.
ಈ ಕುರಿತು ಸಚಿವ ಆರ್. ಅಶೋಕ್ ಕೂಡ ಮಾತನಾಡಿದ್ದಾರೆ. 'ಜನಸಾಮಾನ್ಯವರು ಮಾತ್ರವಲ್ಲದೇ, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿರುವ 30 ಐಟಿ-ಬಿಟಿ ಕಂಪೆನಿಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ. ಅವರ ಲಿಸ್ಟ್ ನಮ್ಮ ಬಳಿ ಇದೆ. ಅವುಗಳನ್ನು ಕೂಡ ಶೀಘ್ರವೇ ತೆರವುಗೊಳಿಸಲಾಗುವುದು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ' ಎಂದರು.
PublicNext
12/09/2022 07:02 pm