ನವದೆಹಲಿ: ಹೊಸ ವರ್ಷದ ಕೊನೆಯ ತಿಂಗಳು ಕೂಡ ತೈಲ ಕಂಪೆನಿಗಳು ಮತ್ತೊಂದು ಬೆಲೆ ಏರಿಕೆಯ ಬರೆ ಎಳೆದಿವೆ. ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ದರ ಬುಧವಾರ (ಇಂದಿನಿಂದಲೇ) ಜಾರಿಗೆ ಬರಲಿದೆ. ಕಳೆದ ನವೆಂಬರ್‌ನಲ್ಲಿ 266.50 ರೂಪಾಯಿ ಏರಿಸಿದ್ದ ಸರ್ಕಾರ ಒಂದು ತಿಂಗಳ ಬಳಿಕ ಮತ್ತೆ ನೂರು ರೂಪಾಯಿ ಐವತ್ತು ಪೈಸೆ ಏರಿಸಿದೆ.
ಇದರಿಂದಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ಮಷಿಯಲ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಿದೆ. ಸದ್ಯ ದೆಹಲಿಯಲ್ಲಿ 19-ಕೆಜಿ ವಾಣಿಜ್ಯ ಸಿಲಿಂಡರ್ ದರ 2,101 ರೂ. ಆಗಿದೆ. ಮುಂಬೈನಲ್ಲಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ 1,950 ರಿಂದ 2,051 ರೂ. ಆದರೆ, ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ದರ 2,177 ರೂ. ಆಗಿದೆ. ಇನ್ನು ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 2,234.50 ಗೆ ಏರಿಕೆಯಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆಸಲಾಗಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ದರ 899.50 ರೂ. ಇದೆ. ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‍ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಅಕ್ಟೋಬರ್ 6 ರಂದು 15 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದಕ್ಕೂ ಮೊದಲು, ಅಕ್ಟೋಬರ್ 1ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‍ಪಿಜಿ ದರಗಳನ್ನು 25 ರೂಗಳಷ್ಟು ಹೆಚ್ಚಿಸಲಾಗಿತ್ತು.
ಪ್ರತಿ ಕುಟುಂಬಕ್ಕೆ ಸರ್ಕಾರ ಗೃಹ ಬಳಕೆಯ 12 ಸಿಲಿಂಡರ್‌ಗಳನ್ನು ಸಬ್ಸಿಡಿಯಲ್ಲಿ ನೀಡುತ್ತಿದೆ. ಈಗ ಎಲ್‍ಪಿಜಿ ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ 79.26 ರೂ.ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಆದರೆ, ಕೆಲವು ಗ್ರಾಹಕರು 158.52 ಅಥವಾ 237.78 ಸಬ್ಸಿಡಿ ಪಡೆಯುತ್ತಿದ್ದಾರೆ.
PublicNext
01/12/2021 06:04 pm