ನವದೆಹಲಿ: ಜುಲೈ 2ರಂದು ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲೊಂದಾದ ಇಂಡಿಗೋದ ಬಹುಪಾಲು ವಿಮಾನಗಳು ಲಭ್ಯತೆಯಿರಲಿಲ್ಲ. ಈ ಕಾರಣಕ್ಕೆ ದೇಶದಲ್ಲಿ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು. ಅಂದು ಸಂಸ್ಥೆಯ ಸುಮಾರು 900 ಕ್ಕೂ ಹೆಚ್ಚು ವಿಮಾನಗಳು ಸಂಚಾರ ವಿಳಂಬವಾಗಿದ್ದವು. ಒಂದೇ ದಿನದಲ್ಲಿ ಇಷ್ಟೊಂದು ವಿಳಂಬಾ ಆಗಿದ್ದಕ್ಕೆ ಕಾರಣ ಏನು ಎಂಬ ಬಗ್ಗೆ ಸಂಸ್ಥೆಯ ಮೂಲಗಳಿಂದ ಮಾಹಿತಿ ದೊರೆತಿದೆ.
ಶನಿವಾರ ಇಂಡಿಗೋ ಸಿಬ್ಬಂದಿ ಏರ್ ಇಂಡಿಯಾ ನಡೆಸುತ್ತಿರುವ ಉದ್ಯೋಗ ಸಂದರ್ಶನಕ್ಕೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
“ಏರ್ ಇಂಡಿಯಾದ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಯು ಶನಿವಾರದಂದು ನಿಗದಿಯಾಗಿತ್ತು ಮತ್ತು ಇಂಡಿಗೋದ ಹೆಚ್ಚಿನ ಕ್ಯಾಬಿನ್ ಸಿಬ್ಬಂದಿಗಳು ರಜೆ ತೆಗೆದುಕೊಂಡಿದ್ದರು. ಇನ್ನು ಕೆಲವರು ಅನಾರೋಗ್ಯದ ಕಾರಣ ರಜರ ಹಾಕಿದ್ದರು. ಇದರಿಂದಾಗಿ ಇಂಡಿಗೋದ 900 ಕ್ಕೂ ಹೆಚ್ಚು ವಿಮಾನಗಳು ದೇಶಾದ್ಯಂತ ವಿಳಂಬವಾಗಿವೆ” ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಟಾಟಾ ಒಡೆತನದ ಏರ್ ಇಂಡಿಯಾ ಜೂನ್ 28 ಮತ್ತು ಜುಲೈ 1 ರಂದು ದೆಹಲಿ ಮತ್ತು ಮುಂಬೈನಲ್ಲಿ ಕ್ಯಾಬಿನ್ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿತ್ತು. ಬೆಂಗಳೂರಿನಲ್ಲಿ ಕ್ಯಾಬಿನ್ ಸಿಬ್ಬಂದಿಯ ವಾಕ್-ಇನ್-ಇಂಟರ್ವ್ಯೂ ಅನ್ನು ಟಾಟಾದ ಏರ್ ಇಂಡಿಯಾ ಜುಲೈ 7 ರಂದು ನಿಗದಿಪಡಿಸಿದೆ. ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಸ್ತುತ ಪ್ರತಿದಿನ ಸುಮಾರು 1,600 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ.
PublicNext
05/07/2022 05:24 pm