ಗದಗ: ಹೀಗೆ ಕಣ್ಣೀರು ಹಾಕ್ತಾ ನೀರಿನಲ್ಲಿ ನೆನೆದು ಹೋದ ಪುಸ್ತಕಗಳನ್ನ ಬಿಸಿಲಿಗೆ ಒಣಗಿಸುತ್ತಿರೋ ಈ ವಿದ್ಯಾರ್ಥಿನಿ ಹೆಸರು ಸುರಯ್ಯ ಹಂಡೇವಾಲಿ. ಗದಗನ ಮಂಜುನಾಥ ನಗರದ ನಿವಾಸಿಯಾಗಿರೋ ಪುಟ್ಟ ಬಾಲಕಿ ತನ್ನ ಅಜ್ಜಿ ಫಾತೀಮಾ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ. ಮಂಜುನಾಥ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಅಜ್ಜಿ ಫಾತೀಮಾಗೆ ಹೆಣ್ಣು ಮೊಮ್ಮಮಗಳಾಗಿರೋ ಸುರಯ್ಯ ಚಿಕ್ಕಂದಿನಲ್ಲೇ ತಾಯಿಯನ್ನ ಕಳೆದುಕೊಂಡಿದ್ದಾಳೆ.ಸುರಯ್ಯಳಿಗೆ ಅಜ್ಜಿಯೇ ಎಲ್ಲ. ಕಷ್ಟಪಟ್ಟು ಸುರಯ್ಯಳನ್ನ ಸಾಕ್ತಿರೋ ಅಜ್ಜಿ ಫಾತೀಮಾಗೆ ತನ್ನ ಮೊಮ್ಮಗಳಂದ್ರೆ, ಪಂಚಪ್ರಾಣ.ಇನ್ನು ಈ ಅಜ್ಜಿ, ಮೊಮ್ಮಗಳು ಕಣ್ಣೀರು ಹಾಕ್ತಿರೋದಕ್ಕೆ ಕಾರಣ, ಸೋಮವಾರ ಸುರಿದ ಧಾರಕಾರ ಮಳೆಯಿಂದಾಗಿ ಮನೆಗೆ ನೀರು ಹೊಕ್ಕು ಅಜ್ಜಿ ಮೊಮ್ಮಗಳಿಬ್ರು ರಾತ್ರಿ ಮನೆಗೆ ಬೀಗ ಹಾಕಿ ಬೇರೆ ಮನೆಗೆ ಹೋಗಿದ್ದಾರೆ.
ಮರುದಿನ ಬೆಳಿಗ್ಗೆ ಬಂದು ನೋಡುವಷ್ಟರಲ್ಲಿ, ಮನೆಯಲ್ಲಿನ ವಸ್ತುಗಳೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗಿವೆ. ಅದರಲ್ಲೂ ಸುರಯ್ಯಳ ಪುಸ್ತಕ ಹಾಗೂ ಕೆಲ ವಸ್ತುಗಳು ಎಲ್ಲವೂ ಮುಳಗಡೆಯಾಗಿದ್ದನ್ನ ಕಂಡು, ವಿದ್ಯಾರ್ಥಿನಿಗೆ ದಿಕ್ಕೇ ತೋಚದಂತಾಗಿದೆ. ಕಳೆದ ಆರು ತಿಂಗಳಿಂದ ಕಣ್ಣು ಪುಳಕಿಸದಂತೆ ಅಭ್ಯಾಸ ಮಾಡ್ತಾ, ಪ್ರತಿದಿನ ನಿದ್ದೆಗೆಟ್ಟು ಬರೆದ ನೋಟ್ಸ್‌ಗಳೆಲ್ಲ ನೀರಲ್ಲಿ ಹಾಳಾಗಿರೋದನ್ನ ಕಂಡು ಸುರಯ್ಯಗೆ ದುಃಖದ ಕಟ್ಟೆ ಒಡೆದು ಹೋಗಿದೆ.
ಮೊಮ್ಮಗಳು ಕಣ್ಣೀರು ಹಾಕ್ತಿರೋದನ್ನ ಕಂಡ ಅಜ್ಜಿ ಫಾತೀಮಾ ಸಹ ಅಳುತ್ತಾ ಕೂತಿದ್ದಾಳೆ. ಒಂದೆಡೆ ತಾಯಿ ಕಳೆದುಕೊಂಡ ಮೊಮ್ಮಗಳ ಮೇಲಿನ ಅಜ್ಜಿಯ ಮಮಕಾರ, ಇತ್ತ ಮುಗ್ಧ ಬಾಲಕಿ ಸುರಯ್ಯಳ ಪಠ್ಯ ಪುಸ್ತಕಗಳ ಮೇಲಿನ ಆಸಕ್ತಿಯ ಈ ಘಟನೆ ಒಂದುಕ್ಷಣ ಕಣ್ಣಂಚನ್ನ ಒದ್ದೆ ಮಾಡದೇ ಇರಲಾರದು.
PublicNext
08/09/2022 10:58 am