ಜಗಿತ್ಯಾಲ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಇಲ್ಲಿ ಗಂಡ ಸತ್ತ ಮೇಲೆಯೂ ಜಗಳ ಮುಂದುವರೆದಿದೆ.
ಈ ಘಟನೆ ನಡೆದಿದ್ದು ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಕೋರುಟ್ಲ ತಾಲೂಕಿನ ಐಲಾಪುರ ಎಂಬಲ್ಲಿ. ಇಲ್ಲಿನ ನಿವಾಸಿ ಗ್ರಾಮದ ನರಸಿಂಹುಲು ಸರಪಂಚ್ ಆಗಿದ್ದು ನಿನ್ನೆ ಶನಿವಾರ ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಪತಿ ಗತಿಸಿದ ಮೇಲೆ ಮುಂದಿನ ಕಾರ್ಯವಿಧಾನಗಳನ್ನೆಲ್ಲ ನೆರವೇರಿಸಿ ಶೋಕ ಪಡಬೇಕಾದ ಆತನ ಇಬ್ಬರು ಪತ್ನಿಯರು ಹೆಣ ಮುಂದಿಟ್ಟುಕೊಂಡೇ ಆಸ್ತಿಗಾಗಿ ಕಿತ್ತಾಡಿಕೊಂಡಿದ್ದಾರೆ.
ಅನುಕೂಲಸ್ಥರಾಗಿದ್ದ ನರಸಿಂಹುಲು ಅವರು ಮತ್ತೊಂದು ಮದುವೆ ಆಗಿದ್ದರು. ಈ ವಿಚಾರ ಮೊದಲ ಪತ್ನಿಗೂ ಗೊತ್ತಿತ್ತು. ಆದ್ರೆ ತಮ್ಮ ಆಸ್ತಿಯನ್ನೆಲ್ಲ ನರಸಿಂಹುಲು ಮೊದಲ ಪತ್ನಿಯ ಹೆಸರಿನಲ್ಲಿ ಮಾಡಿಸಿದ್ದರು. ಪತಿಯ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಧಾವಿಸಿ ಬಂದ ಎರಡನೇ ಪತ್ನಿ ಆಸ್ತಿಗಾಗಿ ಕ್ಯಾತೆ ತೆಗೆದಿದ್ದಾಳೆ. ಮಾತಿಗೆ ಮಾತು ಬೆಳೆದು ಹೆಣದ ಮುಂದೆಯೇ ಇಬ್ಬರೂ ಪತ್ನಿಯರು ಜಗಳವಾಡಿಕೊಂಡಿದ್ದಾರೆ. ನಂತರ ಅನ್ಯದಾರಿ ತಿಳಿಯದೇ ಮೊದಲ ಪತ್ನಿಯು 2ನೇ ಪತ್ನಿಯನ್ನು ಕರೆದುಕೊಂಡು ಕತ್ತಲಾಪುರ ತಹಶೀಲ್ದಾರ್ ಕಚೇರಿಗೆ ಕರೆದೊಯ್ದು 3 ಎಕರೆ ಭೂಮಿಯನ್ನು ಆಕೆಯ ಹೆಸರಿಗೆ ವರ್ಗಾಯಿಸಿದ್ದಾಳೆ.
ನಂತರ ಅಳುತ್ತ ಬಂದ ಇಬ್ಬರೂ ಪತ್ನಿಯರು ಪತಿಯ ಶವದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಇವರಿಬ್ಬರ ಜಗಳ ಕಂಡ ಊರ ಮಂದಿ ದಂಗಾಗಿದ್ದಾರೆ.
PublicNext
10/07/2022 10:27 pm