ಕರ್ತಾರ್‌ಪುರ್(ಪಂಜಾಬ್): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬೇರ್ಪಟ್ಟಿದ್ದ ಇಬ್ಬರು ಸಹೋದರರು 74 ವರ್ಷಗಳ ನಂತರ ಮತ್ತೆ ಭೇಟಿಯಾಗಿದ್ದಾರೆ. ಈ ಸಮ್ಮಿಲನದ ಸವಿಗಳಿಗೆಯ ವಿಡಿಯೋ ವೈರಲ್ ಆಗಿದ್ದು ನೋಡಿದ ಎಲ್ಲರ ಹೃದಯ ಗೆದ್ದಿದೆ.
ಈ ಘಟನೆ ನಡೆದಿದ್ದು ಭಾರತ-ಪಾಕಿಸ್ತಾನ ಗಡಿಯ ಪಂಜಾಬ್‌ನ ಕರ್ತಾರ್‌ಪುರದಲ್ಲಿ. 1947ರಲ್ಲಿ ಭಾರತ ವಿಭಜನೆಯಾದಾಗ ಮೊಹಮ್ಮದ್ ಸಿದ್ದೀಕ್ ಮಗುವಾಗಿದ್ದರು. ದೇಶ ವಿಭಜನೆಯೊಂದಿಗೆ ಅವರ ಕುಟುಂಬವೂ ವಿಭಜನೆಯಾಗಿತ್ತು. ಸಿದ್ದೀಕ್ ಅವರ ಹಿರಿಯ ಸಹೋದರ ಹಬೀಬ್ ಅಲಿಯಾಸ್ ಶೆಲಾ ಅವರು ಭಾರತದಲ್ಲೇ ಉಳಿದಿದ್ದರು.
ಆದ್ರೆ ಇವರಿಬ್ಬರನ್ನು ಪಾಕಿಸ್ತಾನ ಹಾಗೂ ಪಂಜಾಬ್ ಗಡಿ ನಡುವಿನ ಕರ್ತಾರ್‌ಪುರ್ ಕಾರಿಡಾರ್ ಮತ್ತೆ ಭೇಟಿಯಾಗುವಂತೆ ಮಾಡಿದೆ. ಗಡಿಯಿಂದ 5 ಕಿಲೋ ಮೀಟರ್ ದೂರ ಇರುವ ಕರ್ತಾರ್‌ಪುರಕ್ಕೆ ವೀಸಾ ಇಲ್ಲದೇ ತೆರಳಲು ಅನುವು ಮಾಡಿಕೊಡಲಾಗಿದೆ. ಇದರಿಂದ ಈ ಸಹೋದರರು 74 ವರ್ಷಗಳ ನಂತರ ಭೇಟಿಯಾಗಲು ಸಾಧ್ಯವಾಗಿದೆ. ದೂರದಿಂದಲೇ ಒಬ್ಬರನ್ನೊಬ್ಬರು ಕಂಡ ಕೂಡಲೇ ಇಬ್ಬರ ಕಣ್ಣುಗಳು ತೇವಗೊಂಡಿವೆ. ಸಿದ್ದೀಕ್ ಹಾಗೂ ಹಿರಿಯ ಸಹೋದರ ಶೆಲಾ ಅವರು ತಬ್ಬಿಕೊಂಡು ಕಣ್ಣೀರಿಟ್ಟ ಅಪರೂಪದ ದೃಶ್ಯ ಕಲ್ಲು ಹೃದಯವನ್ನೂ ಕರಗಿಸಿಬಿಡುತ್ತೆ.
PublicNext
14/01/2022 12:12 pm