ಲಖನೌ: ಹೆಲಿಕಾಪ್ಟರ್ ದುರಂತದಲ್ಲಿ ದೇಶದ ಸರ್ವಸೇನೆ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಮಡಿದ 11 ಯೋಧರಲ್ಲಿ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಒಬ್ಬರು. ಇವರು ಪತ್ನಿ ಹಾಗೂ ಓರ್ವ ಪುತ್ರಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.
ದೇಶದ ಸೈನ್ಯದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ತಂದೆ ಪೃಥ್ವಿ ಸಿಂಗ್ ಅವರ ಕನಸನ್ನು ನನಸು ಮಾಡೋದಾಗಿ ಪುತ್ರಿ ಆರಾಧ್ಯ ಹೇಳಿದ್ದಾರೆ. ಅಪ್ಪನ ಹಾದಿಯಲ್ಲಿಯೇ ಸಾಗಿ ಅವರ ಕನಸುಗಳನ್ನು ನನಸು ಮಾಡೋದೇ ನನ್ನ ಗುರಿ ಎಂದು ಆರಾಧ್ಯ ಹೇಳಿದ್ದಾರೆ.
ಸದ್ಯ 7ನೇ ತರಗತಿ ಓದುತ್ತಿರುವ ಆರಾಧ್ಯ, ದೇಶಸೇವೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಪ್ಪನೇ ನನ್ನ ನಿಜವಾದ ಹೀರೋ. ಅವರು ನನ್ನ ಬದುಕಿಗೆ ಸ್ಫೂರ್ತಿ. ಅವರು ಯಾವುದನ್ನು ಸಾಧಿಸಬೇಕು ಎಂಬ ಛಲ ಹೊಂದಿದ್ದರೋ ಅದೆಲ್ಲವನ್ನೂ ನಾನು ಪೈಲೆಟ್ ಆಗಿ ಸಾಧಿಸುತ್ತೇನೆ. ನೀನು ಅಂಕಗಳಿಗಾಗಿ ಓದಬೇಡ. ಜ್ಞಾನಕ್ಕಾಗಿ ಓದು. ಅಧ್ಯಯನದತ್ತ ಹೆಚ್ಚು ಗಮನಹರಿಸು ಎಂದು ಹೇಳಿದ್ದರು. ಅದೆಲ್ಲವೂ ನನ್ನ ನೆನಪಿನಲ್ಲಿದೆ. ಅಪ್ಪನಂತೆಯೇ ನಾನೂ ಕೂಡ ಪೈಲೆಟ್ ಆಗಿ ಅವರ ಕಂಡಿದ್ದ ಕನಸುಗಳನ್ನು ನನಸಾಗಿಸುತ್ತೇನೆ ಎಂದು ಆರಾಧ್ಯ ಹೇಳಿದ್ದಾರೆ.
PublicNext
12/12/2021 10:58 pm