ವಿಜಯಪುರ: ವಿಜಯಪುರ ಜಿಲ್ಲೆ ಇಂಡಿಯ ವಿದ್ಯಾನಗರ ಎಂಬಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಭೀಮಾಶಂಕರ ಆನೂರ ಎಂಬಾತ ಅವನ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿಲ್ಲ ಎಂದು ಆತನ ಮನೆಯ ಮುಂದೆ ಆತನ ತಂದೆ ಕುಪೇಂದ್ರ ಮತ್ತು ತಾಯಿ ರತ್ನಾಬಾಯಿ ಪ್ರತಿಭಟನೆ ಮಾಡಿದ್ದಾರೆ.
ಪುತ್ರ ಇಂಡಿ ಪಟ್ಟಣದಲ್ಲಿ ವಾಸವಾಗಿದ್ದು, ನಮ್ಮನ್ನು ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿನ ಮನೆಯಲ್ಲಿ ಬಿಟ್ಟಿದ್ದಾನೆ. ಇಳಿ ವಯಸ್ಸಿನಲ್ಲಿ ನನ್ನ ಪೋಷಣೆ ಮಾಡದೆ ನಿರ್ಲಕ್ಷ್ಯ ಮಾಡಿದ್ದಾನೆ. ವಯಸ್ಸಾದ ನನ್ನ ನೋಡಿಕೊಳ್ಳುವ ಕರ್ತವ್ಯ ಮರೆತಿದ್ದಾನೆ ಎಂದು ಮಗನ ವಿರುದ್ಧ ತಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಕ್ಕಳನ್ನು ಸಾಲ ಮಾಡಿ ಬೆಳೆಸಿದ್ದೆ. ಪತ್ನಿ ಅನಾರೋಗ್ಯಕ್ಕೆ ಒಳಗಾಗಿದ್ದಾಗಲೂ ಸಾಲ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇನೆ. ಆದರೆ ಮಗ ಅಮ್ಮನ ಆಸ್ಪತ್ರೆ ಖರ್ಚಿಗೂ ಹಣ ಕೊಡದ ನೀಚ ಎಂದಿದ್ದಾರೆ.
ಪುತ್ರನಿಗೆ 40 ಗ್ರಾಂ ಚಿನ್ನ ಹಾಗೂ 50,000 ರೂಪಾಯಿ ನೀಡಿದ್ದೇನೆ. ಆತ ತನ್ನ ಪಾಲಿನ ಜಮೀನು ಸಹ ತೆಗೆದುಕೊಂಡಿದ್ದಾನೆ. ನಾನು ಆತನಿಗೆ ನೀಡಿದ ಚಿನ್ನ ಹಾಗೂ ಹಣವನ್ನು ಮರಳಿ ಕೊಡಿಸಿ ಎಂದು ತಂದೆ ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದಾರೆ.
PublicNext
16/09/2021 07:17 pm