ಬೆಳಗಾವಿ- ಯಾರಾದ್ರೂ ಈಜು ಬಾರದವರು ನೀರಲ್ಲಿ ಬಿದ್ದು ಜೀವನ್ಮರಣ ಹೋರಾಡುತ್ತಿದ್ದರೆ? ನಾವು ಸುಮ್ನೇ ಇರ್ತೀವಾ? ನಮಗೆ ಈಜು ಬಾರದಿದ್ದರೆ ಸಹಾಯಕ್ಕಾಗಿ ಸುತ್ತಲೂ ಇರೋರನ್ನ ಕರೀತೀವಿ. ಈಜು ಬಲ್ಲವರಾಗಿದ್ದರೆ ಕ್ಷಣಾರ್ಧದಲ್ಲೇ ನಾವೇ ನೀರಿಗಿಳಿದು ಬಿದ್ದವರನ್ನ ದಡಕ್ಕೆ ತರ್ತೀವಿ ಅಲ್ವಾ?
ಆದ್ರೆ ಇಲ್ಲೊಬ್ಬ ಯುವಕ ತಾನು ವಿಕಲ ಚೇತನನಾಗಿದ್ದರೂ ಅದನ್ನೆಲ್ಲ ಲೆಕ್ಕಿಸದೇ ಕೂಡಲೇ ಕೆರೆಗೆ ಹಾರಿ ಮುಳುಗುತ್ತಿದ್ದ ಬಾಲಕನನ್ನ ರಕ್ಷಿಸಿದ್ದಾನೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಬಳಿ. ವಿಶಾಲ ಕೆರೆಯಲ್ಲಿ ಸುಮಾರು 200ರಿಂದ 250 ಅಡಿ ಈಜಿ ತನ್ನ ಒಂದೇ ಕೈಯಿಂದ ಮುಳುಗುತ್ತಿದ್ದ ಬಾಲಕನ ಸಮೇತ ದಡ ಸೇರಿದ್ದಾನೆ.
ಅಸೋಗಾ ಗ್ರಾಮದ ನಿವಾಸಿಯಾಗಿರುವ ಸಾಹಿಲ್ ಶಿವರಾಮ್ ಕಾಜುಕರ್, 2013ರಲ್ಲಿ ಬೆಳಗಾವಿಯ ಶ್ರೀ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಅಪಘಾತದಲ್ಲಿ ತನ್ನ ಒಂದು ಕೈ ಕಳೆದುಕೊಂಡಿದ್ದ. ನಂತರ ಈಜು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈತ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳಗಾವಿಗೆ ಕೀರ್ತಿ ತಂದಿದ್ದಾನೆ.
ಸಾಹಿಲ್ ಮಾಡಿದ ಈ ಕಾರ್ಯಕ್ಕೆ ಬೆಳಗಾವಿಯ ಕುಂದಾ ಮಂದಿ ಮೆಚ್ಚಿಕೊಂಡು ಭೇಷ್ ಎಂದಿದ್ದಾರೆ.
PublicNext
25/02/2021 03:46 pm