ಗುಜರಾತ್: ಅಹ್ಮದಾಬಾದ್ ನ ಸಾಬರಮತಿ ನದಿ ಕಿನಾರೆಯಲ್ಲಿ ಭವ್ಯವಾಗಿ ಎದ್ದು ನಿಂತಿರುವ ನವೀಕೃತ ' ಸರ್ದಾರ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣ' ಈಗ ವಿಶ್ವ ಕಂಗಳ ಕೇಂದ್ರಬಿಂದು ಎಂಬುದು ಅತಿಶಯೋಕ್ತಿಯಲ್ಲ.
ಪ್ರಸ್ತುತ ಜಗತ್ತಿನ ಅತ್ಯುತ್ತಮ ಕ್ರಿಕೆಟ್ ಸ್ಟೇಡಿಯಂಗಳಾದ ಲಂಡನ್ ನ ಲಾರ್ಡ್ಸ್, ಮೆಲ್ಬೋರ್ನ್ ನ ಎಂಸಿಜಿ, ಕೋಲ್ಕೊತ್ತಾದ ಈಡನ್ ಗಾರ್ಡನ್ ಇತ್ಯಾದಿ ಬೃಹತ್ ಸುಸಜ್ಜಿತ ಸ್ಟೇಡಿಯಂಗಳನ್ನೆಲ್ಲ ಹಿಂದಿಕ್ಕಿದ ಹೆಮ್ಮೆ ಈ ಅಹ್ಮದಾಬಾದ್ ಸ್ಟೇಡಿಯಂ ನದ್ದು!
ಒಂದು ಲಕ್ಷದ ಹತ್ತು ಸಾವಿರ ಪ್ರೇಕ್ಷಕರನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ, ಅತ್ಯಾಧುನಿಕ ತಂತ್ರಜ್ಞಾನ ಬೆರಗು, ಅತ್ಯಾಕರ್ಷಕ ವಿನ್ಯಾಸ ಸೊಬಗು, ಕಣ್ಮನ ಸೆಳೆಯುವ ಸುಂದರತೆ ಹೀಗೆ ಒಂದಕ್ಕೊಂದು ಮಿಗಿಲು ಎಂಬಂತೆ ಯೋಜನಾಬದ್ಧವಾಗಿ ನಿರ್ಮಿಸಲಾಗಿದೆ.
ಕಳೆದ ವರ್ಷವಷ್ಟೇ ' ನಮಸ್ತೇ ಟ್ರಂಪ್' ಜಗದ್ವಿಖ್ಯಾತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಈ ಸ್ಟೇಡಿಯಂ ಸರಿಯಾಗಿ ಒಂದು ವರ್ಷದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಹಣಾಹಣಿಗೆ ಅಣಿಯಾಗಿದೆ.
ಫೆ.24ರಿಂದ ಇಲ್ಲಿ ಭಾರತ- ಇಂಗ್ಲೆಂಡ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಆರಂಭವಾಗಲಿದೆ. ಇದು ಅಹರ್ನಿಶಿ ನಡೆಯುವ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಎಂಬುದು ವಿಶೇಷ. ಈ ಹಿನ್ನೆಲೆಯಲ್ಲಿ ಈ ವಿಶ್ವ ಶ್ರೇಷ್ಠ 'ಸರ್ದಾರ್ ಪಟೇಲ್' ಕ್ರೀಡಾಂಗಣಕ್ಕೊಂದು ಸುತ್ತು ಹಾಕಿ ಬರೋಣ ಬನ್ನಿ...
PublicNext
22/02/2021 11:20 pm