ಕಣ್ಣೂರು: ಸಾಮಾಜಿಕ ಮಾಧ್ಯಮ ಬೆಳೆದಂತೆಲ್ಲ ಕೆಲವೊಂದಿಷ್ಟು ಸೋಜಿಗದ ಸಂಗತಿಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದು ಹೃದಯವಂತರ ಹೃದಯ ಗೆಲ್ಲುತ್ತಿವೆ. ಹೆಚ್ಚು ಹೆಚ್ಚು ಶೇರ್ ಆಗುತ್ತವೆ. ನೋಡಿದ ಕೂಡಲೇ ಶೇರ್ ಮಾಡಬೇಕು ಎನಿಸುತ್ತದೆ. ಕಾರಣ, ಅಂತಹ ವಿಡಿಯೋಗಳಲ್ಲಿ ಮಾನವೀಯ ಅಂತಃಕರಣ ಇರುತ್ತೆ.
ಕಳೆದ ಎರಡು ದಿನಗಳಿಂದ ದೈವದ ಮಡಿಲಲ್ಲಿ ಹೆಣ್ಣು ಮಗುವೊಂದು ಹೋಗಿ ಕುಳಿತುಕೊಳ್ಳುವ ದೃಶ್ಯ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವರು ವಾಟ್ಸಪ್ ಸ್ಟೇಟಸ್‍ಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.
ಕಣ್ಣೂರು ಜಿಲ್ಲೆಯ ಅಂಜಾರಕ್ಕಂಡಿಯಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಈ ಫೋಟೋಗಳನ್ನು ಸೆರೆ ಹಿಡಿದಿರೋದು ಅಭಿಜಿತ್ ಕಾನುಮಾರತ್ತ ಎಂಬ ಛಾಯಾಗ್ರಾಹಕ. ಭಗವತಿ ತೈಯ್ಯಂ ಮಡಿಲಲ್ಲಿ ಸ್ವಲ್ಪವೂ ಅಂಜಿಕೆಯಿಲ್ಲದೆ ಹೆಣ್ಣು ಮಗು ಕುಳಿತಿರುವುದು ನೆರೆದವರ ಹುಬ್ಬೇರಿಸುವಂತೆ ಮಾಡಿದೆ. ಇದರ ಕೆಲ ಫೋಟೋ ಹಾಗೂ ವೀಡಿಯೋಗಳನ್ನು ಸ್ಥಳದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಅಲ್ಲಿ ಆಗಿದ್ದೇನೆಂದರೆ, ದೈವ ಮಗುವನ್ನು ಕರೆಯುತ್ತಿದ್ದಂತೆಯೇ ಅದರ ಬಳಿಗೆ ಹೋಗುತ್ತಾಳೆ. ಅಲ್ಲದೆ ದೈವ ಎತ್ತಿಕೊಳ್ಳಲೆಂದು ಕೈ ಮುಂದೆ ಮಾಡಿದಾಗ ಆ ಮಗು ಯಾವುದೇ ಅಂಜಿಕೆ-ಅಳುಕು ಇಲ್ಲದೆ ಕೈ ಮುಂದೆ ಮಾಡಿ ಎತ್ತಿಕೊಳ್ಳುವಂತೆ ಸೂಚನೆ ನೀಡುತ್ತಾಳೆ. ಈ ವೇಳೆ ದೈವ ಆಕೆಯನ್ನು ಎತ್ತಿಕೊಂಡು ತನ್ನ ಮಡಿಲಲ್ಲಿ ಕುಳ್ಳಿರಿಸುತ್ತದೆ. ಬಳಿಕ ತಲೆ ಸವರಿ ಬಿಗಿಯಾಗಿ ಅಪ್ಪಿಕೊಳ್ಳುತ್ತದೆ. ಅಂತೆಯೇ ಮಗು ಕೂಡ ದೈವದ ಎದೆಯಲ್ಲಿ ತಲೆಯಿಟ್ಟು ತನ್ನ ಮುಗ್ಧತೆ ಮೆರೆದಿದೆ. ಇದು ಅಪರೂಪದಲ್ಲೇ ಅಪರೂಪದ ಸಂಗತಿ ಅಲ್ವೇ?
PublicNext
18/02/2021 06:51 pm