ದಾವಣಗೆರೆ: ಆತ ಸಂಗೀತ ಕಲಿತಿಲ್ಲ. ಕೇವಲ ಮೊಬೈಲ್ ನಲ್ಲಿ ಹಾಡು ಕೇಳಿ ಸುಶ್ರಾವ್ಯವಾಗಿ ಹಾಡ್ತಾನೆ. ಆತನ ಗಾಯನಕ್ಕೆ ಜನರು ಮಾತ್ರ ಅಲ್ಲ, ಕುರಿಗಳು ತಲೆದೂಗುತ್ತವೆ. ವರನಟ ಡಾ. ರಾಜ್ ಕುಮಾರ್ ಸಿನಿಮಾಗಳ ಹಾಡನ್ನು ಕೇಳಿದರೆ ವಾಹ್ ಅನ್ನೋದವರಿಲ್ಲ. ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಮನೆಮಾತಾದ ಕುರಿಗಾಹಿ ಹನುಮಂತನ ಶೈಲಿಯಲ್ಲಿಯೇ ಹಾಡುವ ಮೂಲಕ ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದ ಕುರಿಗಾಹಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಈತನ ಹೆಸರು ನಿಂಗರಾಜ್. ಕುರಿಕಾಯುವ ಕಾಯಕ ಈತನದ್ದು. ನಿತ್ಯ ಬೆಳಿಗ್ಗೆ ಎದ್ದು ಕುರಿಗಳಿಗೆ ಮೇವು ಹುಡುಕಿಕೊಂಡು ಹೋಗ್ತಾನೆ. ದಿನಪೂರ್ತಿ ಇವುಗಳ ಜೊತೆ ಕಾಲಕಳೆಯುತ್ತಾನೆ. ಈ ಕುರಿಗಾಹಿಗೆ ಸಂಗೀತ ಸರಸ್ವತಿ ಒಲಿದು ಆತನ ಬಾಯಿಯಲ್ಲಿ ಸ್ವರವಾಗಿ ನಲಿಯತ್ತಿದ್ದಾಳೆ. ವರನಟ ಡಾ. ರಾಜ್ ಕುಮಾರ್ ಅವರ ಬಬ್ರುವಾಹನ, ಕವಿರತ್ನ ಕಾಳಿದಾಸ ಸಿನಿಮಾ ಸೇರಿದಂತೆ ಹಲವು ಹಾಡುಗಳನ್ನು ಕೇಳಿದರೆ ಬೇಷ್ ಅನ್ನೋದು ಗ್ಯಾರಂಟಿ. ಈತನ ಗಾಯನ ಕೇಳಿದರೆ ಮೂಕಪ್ರಾಣಿಗಳು ತಲೆದೂಗುತ್ತವೆ. ಮಾತ್ರವಲ್ಲ, ಹಾಡು ಕೇಳಲು ಎಷ್ಟೋ ಮಂದಿ ಇವನ ಬಳಿ ಹೋಗುತ್ತಾರೆ. ಇದು ನಿಂಗರಾಜ್ ನ ಹೆಗ್ಗಳಿಕೆ.
16 ವರ್ಷದಿಂದ ಕುರಿ ಕಾಯುವ ಕೆಲಸ ಮಾಡುತ್ತಿರುವ ನಿಂಗರಾಜ್ ದಿನದಿಂದ ದಿನಕ್ಕೆ ತುಂಬಾ ರಾಗಬದ್ಧವಾಗಿ ಹಾಡುವುದನ್ನು ಮುಂದುವರಿಸಿದ್ದಾನೆ. ಅದರಲ್ಲಿಯೂ ಡಾ. ರಾಜ್ ಕುಮಾರ್ ಅಭಿನಯದ ಕವಿರತ್ನ ಕಾಳಿದಾಸ ಸಿನಿಮಾದ ಮಾಣಿಕ್ಯ ವೀಣಾ ಕಠಿಣ ಹಾಡನ್ನ ಸುಲಭವಾಗಿ ಹಾಡುತ್ತಾನೆ. ರಾಜಕುಮಾರ್, ವಿಷ್ಣುವರ್ಧನ್ ಸಿನಿಮಾಗಳ ಹಾಡುಗಳು ಎಲ್ಲವನ್ನ ಅದ್ಭುತವಾಗಿ ಹಾಡುತ್ತಾನೆ. ಸಂಗೀತ ಗುರುಗಳು ಇಲ್ಲದೇ ಏಕಲವ್ಯನಂತೆ ಸಂಗೀತ ಅಭ್ಯಾಸ ಮಾಡ್ತಿದ್ದಾನೆ. ಕೇವಲ ಮೊಬೈಲ್ ನಲ್ಲಿ ಹಾಡು ಕೇಳಿ ಈ ರೀತಿಯಾಗಿ ಹಾಡೋ ನಿಂಗರಾಜ್ ಗೆ, ಒಳ್ಳೆಯ ಸಿಂಗರ್ ಆಗೋ ಆಸೆ ಇದೆ. ಆದ್ರೆ ಮನೆಯಲ್ಲಿ ಬಡತನ ಸಮಸ್ಯೆ ಒಂದೆಡೆಯಾದರೆ ಸೂಕ್ತ ಪ್ರೋತ್ಸಾಹ ಸಿಕ್ಕಿಲ್ಲ.
ಇನ್ನೂ ಈತ ಓದಿದ್ದು ಕೇವಲ 6ನೇ ಕ್ಲಾಸ್. 12 ನೇ ವಯಸ್ಸಿನಲ್ಲಿ ಕುರಿಗಳನ್ನ ಮೇಯಿಸಲು ಶುರು ಮಾಡಿದ್ದ ನಿಂಗರಾಜ್, ಚಿಕ್ಕ ವಯಸ್ಸಿನಲ್ಲೆ ತಂದೆಯನ್ನ ಕಳೆದುಕೊಂಡಿದ್ದ. ಆದರೂ ಇಲ್ಲಿಯವರೆಗೂ ಬೇರೆಯವರು ಕುರಿ ಮೇಯಿಸಿ ಇದೀಗ ಸ್ವಂತವಾಗಿ 20 ಕುರಿಗಳನ್ನ ಮಾಡಿಕೊಂಡಿದ್ದಾನೆ. ಜೊತೆಗೆ ಚಿಕ್ಕ ವಯಸ್ಸಿನಿಂದ ಒಳ್ಳೆಯ ಹಾಡುಗಾರ ಆಗಬೇಕು ಎಂದುಕೊಂಡಿದ್ದ. ಆದ್ರೆ ಸಾಧ್ಯವಾಗಿರಲಿಲ್ಲ. ಕುರಿ ಕಾಯುವಾಗ ಹಾಡಿದ ಹಾಡುಗಳಿಗೆ ಜನರು ಫಿದಾ ಆಗಿದ್ದಾರೆ.
ಕುರಿ ಮೇಯಿಸುತ್ತ ಹಳ್ಳದಲ್ಲೇ ಮೊಬೈಲ್ ನಲ್ಲಿ ಹಾಡು ಕೇಳಿ ಸಂಗೀತ ಅಭ್ಯಾಸ ಮಾಡಿದ್ದಾನೆ. ಹಳ್ಳದಲ್ಲಿ ಹಾಡು ಹೇಳುವುದನ್ನ ಕೇಳಿರುವ ಗ್ರಾಮಸ್ಥರು ಈತನ ಧ್ವನಿಯನ್ನ ಮೆಚ್ಚಿಕೊಂಡಿದ್ದಾರೆ. ಹನಮಂತನ ಹಾಗೆ ನಮ್ಮೂರಲ್ಲಿ ನಿಂಗರಾಜ ಇದ್ದಾನೆ. ಈತನನ್ನೂ ಗ್ರಾಮಸ್ಥರ ಸಹಕಾರದಿಂದ ರಿಯಾಲಿಟಿ ಶೋಗೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ ಅಂತಾರೆ ಗ್ರಾಮಸ್ಥರು.
PublicNext
27/01/2021 04:42 pm