ಹೊಸದಿಲ್ಲಿ : ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ 'ಕೊಡುಗೆ 'ಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ' ಇಗ್ ನೊಬೆಲ್' ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.
ಬ್ರೆಝಿಲ್, ಬ್ರಿಟನ್, ಮೆಕ್ಸಿಕೋ, ಬೆಲಾರೂಸ್, ಅಮೆರಿಕ, ಟರ್ಕಿ, ರಷ್ಯಾ ಮತ್ತು ತುರ್ಕಮೆನಿಸ್ತಾನ್ ಸರಕಾರಗಳ ಮುಖ್ಯಸ್ಥರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಅರಿವು ಮೂಡಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.
ಜತೆಗೆ ಜನಜೀವನದ ಮೇಲೆ ವಿಜ್ಞಾನಿಗಳು ಮತ್ತು ವೈದ್ಯರಿಗಿಂತಲೂ ರಾಜಕಾರಣಿಗಳು ಹೆಚ್ಚು ಪರಿಣಾಮ ಬೀರುತ್ತಾರೆ ಎಂಬುದನ್ನು ನರೇಂದ್ರ ಮೋದಿ ಅವರು ಪ್ರಪಂಚಕ್ಕೇ ತೋರಿಸಿಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರಿ 'ಇಗ್ ನೊಬೆಲ್' ಗೌರವ ಒಲಿದು ಬಂದಿದೆ.
ಪ್ರಶಸ್ತಿಯ ಹೆಸರು ''ಇಗ್ ನೊಬೆಲ್ ' ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೊಟ್ಟಿಗೆ ಯಾವುದೇ ಸಂಬಂಧ ಹೊಂದಿಲ್ಲ.
ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಹಾರ್ವರ್ಡ್ ವಿವಿಯ ಸ್ಯಾಂಡರ್ಸ್ ಥಿಯೇಟರ್ ನಲ್ಲಿ ಪ್ರಧಾನ ಮಾಡಲಾಗುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭ ವಿಲಕ್ಷಣವಾಗಿರುತ್ತದೆ. ನೊಬೆಲ್ ಪ್ರಶಸ್ತಿ ಪುರಸ್ಕೃತರು 'ಇಗ್ನೊಬೆಲ್ ಪ್ರಶಸ್ತಿಗಳನ್ನು ಪ್ರದಾನಿಸುತ್ತಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ಪುರಸ್ಕೃತರಿಗೆ ಸರಿಯಾಗಿ 60 ಸೆಕೆಂಡ್ ಗಳ ಕಾಲಾವಕಾಶವಿರುತ್ತದೆ.
ಈ ಬಗ್ಗೆ ನಿಗಾ ವಹಿಸಲು ಸಿಡುಕುಮೋರೆಯ ಎಂಟರ ಹರೆಯದ ಬಾಲಕಿಯನ್ನು ನಿಯೋಜಿಸಲಾಗುತ್ತದೆ. 60 ಸೆಕೆಂಡ್ ಗಳ ನಿಯಮ ಉಲ್ಲಂಘನೆಯಾದಾಗ ಈ ಬಾಲಕಿ ವೇದಿಕೆಗೆ ಬಂದು 'ದಯವಿಟ್ಟು ನಿಲ್ಲಿಸಿ,ನಿಮ್ಮ ಭಾಷಣ ನನಗೆ ಬೇಸರ ಹುಟ್ಟಿಸಿದೆ 'ಎಂದು ಹೇಳುತ್ತಾಳೆ.
ಸಾವಿರಕ್ಕೂ ಅಧಿಕ ವೀಕ್ಷಕರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಮತ್ತು ವೇದಿಕೆಯ ಮೇಲೆ ಪೇಪರ್ ಬಾಣಗಳನ್ನು ತೂರಲು ಅವರಿಗೆ ಅವಕಾಶ ನೀಡಲಾಗುತ್ತದೆ.
ಈ ಕಾರ್ಯಕ್ರಮವನ್ನು ಇಂಟರ್ನೆಟ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಆದರೆ ಈ ವರ್ಷ ಕೋವಿಡ್ ಬಿಕ್ಕಟ್ಟಿನಿಂದಾಗಿ ಇಡೀ ಕಾರ್ಯಕ್ರಮ ಆನ್ ಲೈನ್ ನಲ್ಲಿ ನಡೆದಿದೆ.
ಮೋದಿ ಈ ಪ್ರಶಸ್ತಿಗೆ ಪಾತ್ರರಾದ ಮೊದಲ ವ್ಯಕ್ತಿಯಲ್ಲ
ಮೊದಲ 'ಇಗ್ನೊಬೆಲ್' ಪ್ರಶಸ್ತಿಗಳನ್ನು 1991ರಲ್ಲಿ ಪ್ರದಾನಿಸಲಾಗಿತ್ತು.
ಅಣ್ವಸ್ತ್ರದ 'ಆಕ್ರಮಣಕಾರಿ ಶಾಂತಿಯುತ 'ನಿಷ್ಕ್ರಿಯತೆಗಾಗಿ 1998ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಆ ವರ್ಷದ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು.
ವಯಸ್ಕರು ಆಗಾಗ್ಗೆ ಮೂಗಿನಲ್ಲಿ ಬೆರಳು ತೂರಿಸುತ್ತಿರುತ್ತಾರೆ ಎನ್ನುವುದನ್ನು ಕಂಡು ಹಿಡಿದಿದ್ದಕ್ಕಾಗಿ ಚಿತ್ತರಂಜನ ಅಂದ್ರಾದೆ ಮತ್ತು ಬಿ.ಎಸ್.ಶ್ರೀಹರಿ ಅವರಿಗೆ 2001ರಲ್ಲಿ ಸಾರ್ವಜನಿಕ ಆರೋಗ್ಯ ಪ್ರಶಸ್ತಿಯನ್ನು, ಆನೆಗಳ ಮೇಲ್ಮೈ ವಿಸ್ತೀರ್ಣವನ್ನು ಅಂದಾಜಿಸಿದ್ದಕ್ಕೆ ಕೆ.ಪಿ.ಶ್ರೀಕುಮಾರ ಮತ್ತು ಜಿ.ನಿರ್ಮಲನ್ ಅವರಿಗೆ 2002ರಲ್ಲಿ ಗಣಿತ ಪ್ರಶಸ್ತಿಯನ್ನು ಮತ್ತು ಮೃತ ವ್ಯಕ್ತಿಗಳ ಸಂಘವನ್ನು ಸೃಷ್ಟಿಸಿದ್ದಕ್ಕಾಗಿ ಲಾಲ್ ಬಿಹಾರಿಯವರಿಗೆ 2003ರ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು. ಭಾರತದೊಂದಿಗೆ ಗುರುತಿಸಿಕೊಂಡಿರುವ ಇನ್ನೂ ಹಲವರು ಇಗ್ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
PublicNext
21/09/2020 11:38 am