ಚೆನ್ನೈ: ಯುದ್ಧ ಭೂಮಿ ಉಕ್ರೇನ್ ನಿಂದ ಜನರನ್ನು ರಕ್ಷಿಸುವುದು ಒಂದು ಸವಾಲಿನ ಕೆಲಸವಾಗಿದೆ. ಈ ವೇಳೆ ಓದಲು ಹೋದ ವಿದ್ಯಾರ್ಥಿಗಳು ತಾವು ಪ್ರಿತಿಯಿಂದ ಸಾಕಿದ ಪ್ರಾಣಿಗಳನ್ನು ಬಿಟ್ಟು ಬರಲಾಗದೆ ಮಮ್ಮಲ ಮರುಗಿದ ಘಟನೆಗಳು ಹೃದಯ ಹಿಂಡಿದಂತಾಗುವಂತಿವೆ.
ಇದರ ಮಧ್ಯೆ ಚೆನ್ನೈನ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ನಾಯಿಗಾಗಿ ತನ್ನ ಲಗೇಜ್ ನ್ನು ಯುದ್ಧ ಭೂಮಿಯಲ್ಲಿಯೇ ಬಿಟ್ಟು ನಾಯಿಯೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಕೀರ್ತನಾ, ಸಾಕು ಪ್ರಾಣಿಯನ್ನು ತರಲು ಅವಕಾಶ ನೀಡದ ಕಾರಣ ನಾನು ನಾಲ್ಕು ಬಾರಿ ವಿಮಾನ ರದ್ದುಗೊಳಿಸಬೇಕಾಯಿತು. ನಾನು ಎರಡು-ಮೂರು ದಿನಗಳವರೆಗೆ ಕಾದಿದ್ದೆ. ಕೊನೆಗೂ ರಾಯಭಾರ ಕಚೇರಿಯಿಂದ ನನಗೆ ಕರೆ ಬಂತು.
ನಾಯಿಮರಿ ಬೇಕಾದರೆ ಲಗೇಜ್ ಬಿಟ್ಟು ಬರಬೇಕಾಗಿತ್ತು. ಹೀಗಾಗಿ ಅಧಿಕಾರಿಗಳ ಷರತ್ತಿಗೆ ಒಪ್ಪಿದೆ. ನನಗೆ ಲಗೇಜ್ ಗಿಂತ ನನ್ನ ಸಾಕುಪ್ರಾಣಿ ಮುಖ್ಯ ಎಂದು ಅದನ್ನೇ ಚೆನ್ನೈಗೆ ತಂದಿರುವೆ ಎಂದು ಕೀರ್ತನಾ ಹೇಳಿದರು. ಕೀರ್ತನಾ ತಮಿಳುನಾಡಿನ ಮೈಲಾಡುತುರೈ ನಿವಾಸಿಯಾಗಿದ್ದು, ಉಕ್ರೇನ್ ನ ಉಜ್ಹೋರೋಡ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ 5ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ.
ಎರಡು ವರ್ಷದ ಪೆಕಿಂಗೀಸ್ ತಳಿಯ ನಾಯಿಮರಿ ಕ್ಯಾಂಡಿಯನ್ನು ಕರೆತಂದ ಕೀರ್ತನಾ ಸ್ಟೋರಿ ಕೇಳಿದ ಅನೇಕರು ಬೇಷ್ ಬೇಷ್ ಎಂದಿದ್ದಾರೆ.
PublicNext
06/03/2022 10:57 pm