ತಿರುವನಂಪುರಂ: ತಾಯಿ ಹಾಗೂ ಮಲತಂದೆಯ ಚಿತ್ರಹಿಂಸೆಗೆ ನಲುಗಿದ್ದ ಯುವತಿಯನ್ನು ದಂಪತಿ ದತ್ತು ಪಡೆದು ಆಕೆಗೆ ಹೊಸ ಬದುಕು ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊಂಡಾಜಿ ನಿವಾಸಿಯಾಗಿರುವ ಸೂರ್ಯಪ್ರಭಾ (18) ಅವರಿಗೆ ಶಿವದಾಸನ್ ದಂಪತಿ ಮದುವೆ ಮಾಡಿಸಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ದಂಪತಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂರ್ಯಪ್ರಭಾ ಅವರು ಕೆಲ ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದಳು. ಬಳಿಕ ತಾಯಿ ಮತ್ತು ಮಲತಂದೆಯ ಜೊತೆ ವಾಸಿಸುತ್ತಿದ್ದಳು. ಆದರೆ ಈ ದಂಪತಿ ಸೂರ್ಯಪ್ರಭಾಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಸೂರ್ಯಪ್ರಭಾ ಕೂಡ ಬೇಸತ್ತಿದ್ದಳು. ಯುವತಿ ಸೂರ್ಯಪ್ರಭಾಳ ಕಷ್ಟ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆರೋಪಿ ಮಲತಂದೆಯನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ದಿನ ನಿತ್ಯವೂ ನರಕ ಅನುಭವಿಸುತ್ತಿದ್ದ ಸೂರ್ಯಪ್ರಭಾ ಪೋಷಕರ ಜೊತೆಗೆ ಇರಲು ನಿರಾಕರಿಸಿದಳು.
ಪಜಯನ್ನೂನಲ್ಲಿರುವ ಶಿವದಾಸನ್ ದಂಪತಿಯ ವ್ಹೀಲರ್ ಶಾಪನ್‌ನಲ್ಲಿ ಸೂರ್ಯಪ್ರಭಾ ಕೆಲ ದಿನಗಳವರೆಗೆ ಕೆಲಸ ಮಾಡಿದ್ದಳು. ಆಗ ನಿಶಾ ಅವರು ಸೂರ್ಯಪ್ರಭಾಳನ್ನು ಮಗಳಂತೆ ನೋಡಿಕೊಳ್ಳುತ್ತಿದ್ದರು. ಹೀಗಾಗಿ ಆಕೆಯ ಎಲ್ಲ ವಿಷಯ ತಿಳಿದ ಬಳಿಕ ದಂಪತಿ ಪೊಲೀಸ್ ಅಧಿಕಾರಿಗಳ ಮುಂದೆ ಮನವಿ ಮಾಡಿಕೊಂಡು ಆಕೆಯನ್ನು ದತ್ತು ಪಡೆದು ತಮ್ಮೊಂದಿಗೆ ಕರೆದೊಯ್ದರು.
ಸೂರ್ಯಪ್ರಭಾಳ ಬಗ್ಗೆ ತಿಳಿದ ತಿರುವಿಲ್ವಮಲಾ ನಿವಾಸಿ ಮನೋಜ್ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದಾನೆ. ಇದನ್ನು ತಿಳಿದ ಶಿವದಾಸನ್ ದಂಪತಿ ಮದುವೆ ಸಿದ್ಧತೆ ಮಾಡಿ, ಮದುವೆ ಮಾಡಿಕೊಟ್ಟಿದ್ದಾರೆ.
PublicNext
23/12/2020 03:59 pm