ಧಾರವಾಡ: ಮನರಂಜನೆಗಾಗಿ ನಡೆಯುವ ಖಾಲಿ ಗಾಡಾ ಓಡಿಸುವ ಸ್ಪರ್ಧೆಗಳು ಒಮ್ಮೊಮ್ಮೆ ಮೂಕ ಪ್ರಾಣಿಗಳಿಗೆ ಏನೆಲ್ಲ ಅವಾಂತರಗಳನ್ನು ತಂದೊಡ್ಡುತ್ತವೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಧಾರವಾಡದ ಕಮಲಾಪುರದಲ್ಲಿ ನಡೆದಿದೆ.
ಗ್ರಾಮಾಂತರ ಭಾಗಗಳಲ್ಲಿ ಮನರಂಜನೆಗಾಗಿ ಖಾಲಿ ಗಾಡಾ ಓಡಿಸುವ ಸ್ಪರ್ಧೆಗಳನ್ನು ಏರ್ಪಡಿಸುವುದು ಸಹಜ. ಅದಕ್ಕಾಗಿಯೇ ಎತ್ತುಗಳನ್ನು ಹುರಿಗೊಳಿಸಿರುತ್ತಾರೆ. ಆದರೆ, ಈ ಸ್ಪರ್ಧೆಗಳು ಒಮ್ಮೊಮ್ಮೆ ಎತ್ತುಗಳ ಜೀವಕ್ಕೆ ಕುತ್ತು ತರುತ್ತವೆ.
ಕಮಲಾಪುರದಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಸುತಗಟ್ಟಿ ಗ್ರಾಮದ ರೈತರೊಬ್ಬರಿಗೆ ಸೇರಿದ ಎತ್ತಿನ ಮುಂದಿನ ಎರಡೂ ಕಾಲುಗಳು ಮುರಿದು ಎತ್ತು ಮೇಲೇಳದಂತ ಸ್ಥಿತಿ ನಿರ್ಮಾಣವಾಗಿದೆ. ಎತ್ತಿನ ಎರಡೂ ಕಾಲುಗಳು ಮುರಿದು ಒದ್ದಾಡುತ್ತಿದ್ದ ದೃಶ್ಯ ಕಂಡು ಅದರ ಮಾಲೀಕ ಗೋಳಾಡುತ್ತಿದ್ದ ದೃಶ್ಯ ಕಂಡು ಬಂತು. ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಎತ್ತು ಇದಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳಗಾವಿ, ಧಾರವಾಡ ಸೇರಿದಂತೆ ಅನೇಕ ಕಡೆಗಳಿಂದ ಬಂದ ಎತ್ತುಗಳು ಪಾಲ್ಗೊಂಡಿದ್ದವು.
ಆದರೆ, ಸುತಗಟ್ಟಿಯ ಈ ಎತ್ತಿನ ಕಾಲು ಮುರಿದು ರೈತ ಗೋಳಾಡುವಂತಾಯಿತು. ಇನ್ನ್ಯಾವತ್ತೂ ಸ್ಪರ್ಧೆಯಲ್ಲಿ ಭಾಗಿಯಾಗಬೇಡ, ಈ ಸ್ಪರ್ಧೆಗೆ ಕೈ ಮುಗಿದು ಬಿಟ್ಟು ಬಿಡು ಎಂದು ಇನ್ನೋರ್ವ ಸ್ನೇಹಿತ ಆ ಎತ್ತಿನ ಮಾಲೀಕನಿಗೆ ಹೇಳುತ್ತಿದ್ದ ದೃಶ್ಯ ಕೂಡ ಕಂಡು ಬಂತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/01/2022 03:59 pm