ಅಣ್ಣಿಗೇರಿ: ಆತ ಕಲಿತದ್ದು 10 ನೆಯ ತರಗತಿ. ಅದರಲ್ಲೂ ಆತ ಫೇಲ್ ಆಗಿದ್ದ. ಆದರೆ ಈತನಿಗೆ ಒಲಿದಿದ್ದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ವಿಶೇಷ ತಂತ್ರಜ್ಞಾನದ ಮೂಲಕವೇ ಹೊಸ ಹೊಸ ಆವಿಷ್ಕಾರ ಮಾಡಿದಕ್ಕೆ ಸದ್ಯ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪಾತ್ರವಾದ ನಡಕಟ್ಟಿ ಅವರ ಸಾಧನೆಗೆ ಸ್ಫೂರ್ತಿ ಸಮಾಜಕ್ಕೆ ರೈತ ಸಮುದಾಯಕ್ಕೆ ಏನಾದರು ಕೊಡಬೇಕು ಎಂಬ ಹಂಬಲ ಅಂದರೆ ನೀವು ನಂಬಲೇಬೇಕು.
ಹೀಗೆ ತಾವೇ ಸಿದ್ದ ಮಾಡಿರುವ ಕೃಷಿ ಉಪಕರಣಗಳನ್ನು ಪರಿಶೀಲನೆ ಮಾಡುತ್ತಿರುವ ಇವರು ಅಬ್ದುಲ್ ಖಾದರ್ ನಡಕಟ್ಟಿನ್. ಅಣ್ಣಿಗೇರಿ ಪಟ್ಟಣದ ರೈತಾಪಿ ಕುಟುಂಬದಿಂದ ಬಂದ ಇವರು ತಮ್ಮದೇ ಆದ ವಿಶೇಷತೆಗಳುಳ್ಳ ಕೂರಿಗೆ ಯಂತ್ರಗಳನ್ನು ಸಿದ್ಧಪಡಿಸಿ ಈ ಯಂತ್ರಗಳಿಂದಲೇ ಇವರಿಗೆ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖಾದರ್ ನಡಕಟ್ಟಿನ್ ರಿಗೆ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಪದ್ಮಶ್ರೀ ಗೌರವಕ್ಕೆ ಅಬ್ದುಲ್ ಪಾತ್ರರಾಗಿದ್ದಾರೆ. ಮೂಲತಃ ಕೃಷಿ ಕುಟುಂಬದಲ್ಲೇ ಹುಟ್ಟಿದ್ದ ಅಬ್ದುಲ್ ರೈತರಿಗೆ ಏನಾದ್ರು ವಿಶೇಷವಾಗಿ ಮತ್ತು ಅತಿವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡುಹಿಡಿಯಬೇಕು ಅಂತ ನಿರಂತರ ಪ್ರಯತ್ನದಿಂದ ಕೂರಿಗೆ ಯಂತ್ರವನ್ನ ಕಂಡುಹಿಡಿದಿದ್ದಾರೆ.
ಮಳೆಗಾಲ ಬರುತ್ತಿದ್ದಂತೆಯೇ ರೈತರು ಕೃಷಿ ಚಟುವಟಿಕೆ ಶುರು ಮಾಡುತ್ತಾರೆ. ಒಮ್ಮೆಲೇ ಎಲ್ಲರೂ ಕೃಷಿ ಚಟುವಟಿಕೆ ಶುರು ಮಾಡೋದ್ರಿಂದಾಗಿ ಎತ್ತುಗಳ ಹಾಗೂ ಕೂಲಿ ಕಾರ್ಮಿಕರಿಗೆ ಭಾರೀ ಬೇಡಿಕೆ ಬರುತ್ತದೆ. ಇನ್ನು ಹೆಚ್ಚು ಹೊಲ ಇದ್ದವರ ಪಾಡಂತೂ ಹೇಳತೀರದು. ಹೊಲ ಸಮತಟ್ಟು ಮಾಡಲು, ಊಳಲು ಯಂತ್ರಗಳನ್ನು ಬಳಸಿಕೊಳ್ಳಬಹುದು. ಆದಾದ ಬಳಿಕ ಬಿತ್ತನೆ ಮಾಡಲು ಎತ್ತುಗಳ ಅಥವಾ ಕೃಷಿ ಕೂಲಿ ಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತೆ. ಇದನ್ನು ಗಮನಿಸಿದ ನಡಕಟ್ಟಿನ್, ರೈತರಿಗೆ ಅತ್ಯವಶ್ಯಕವಾದ ಕೂರಿಗೆ, ಅಂದರೆ ಬಿತ್ತನೆ ಮಾಡೋ ಯಂತ್ರವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏಕೆಂದರೆ ಬೇರೆ ಬೇರೆ ಬೆಳೆಗಳಿಗೆ ಮಧ್ಯದಲ್ಲಿನ ಅಂತರವೂ ಬೇರೆ ಬೇರೆಯಾಗಿರುತ್ತದೆ.
ಇನ್ನು ಬೀಜವನ್ನು ಭೂಮಿಯಲ್ಲಿ ಬಿತ್ತುವಾಗ ತುಂಬಾನೇಮಾಡಿಸಿದರು ಹುಷಾರಾಗಿಯೇ ಕೆಲಸ ಮಾಡಬೇಕಾಗುತ್ತದೆ. ಇದೆಲ್ಲವನ್ನು ಕಾರ್ಮಿಕರ ಕೈಯಿಂದ ಮಾಡಿಸಿದರೆ ಉತ್ತಮ. ಆದರೆ ಅದನ್ನು ಯಂತ್ರವೊಂದು ಮಾಡುತ್ತದೆ ಅನ್ನೋ ಕಲ್ಪನೆಯೇ ಒಂದು ವಿಚಿತ್ರ. ಅಂಥ ಕಲ್ಪನೆಯನ್ನು ಸಾಕಾರಗೊಳಿಸಲು ಅಬ್ದುಲ್ ಖಾದರ್ ಸಿದ್ಧವಾಗಿದ್ದರು.
ಸಣ್ಣದಾಗಿ ಆರಂಭವಾದ ಈ ಸಂಶೋಧನೆ ಇದೀಗ ಹೆಮ್ಮರವಾಗಿ ಬೆಳೆದಿದ್ದು ಅಲ್ಲದೆ ನೂರಾರು ಜನರಿಗೆ ಉದ್ಯೋಗವನ್ನ ಸಹ ನೀಡಿದೆ. ತಮ್ಮದೇ ಆದ ಕೃಷಿ ಉತ್ಪನ್ನಗಳ ಮೂಲಕ ರೈತರ ಕೃಷಿಗೆ ಅನುಕೂಲ ಮಾಡಿಕೊಟ್ಟಿದ್ದು, ಈ ಪ್ರಶಸ್ತಿ ಇಡೀ ರೈತ ಕುಲಕ್ಕೆ ಬಂದ ಪ್ರಶಸ್ತಿ ಅನ್ನೋದು ಅಬ್ದುಲ್ ಅವರ ಮಾತಾಗಿದ್ದು, ಪ್ರಶಸ್ತಿ ಸಿಕ್ಕಿದಕ್ಕೆ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/01/2022 11:10 am