ಧಾರವಾಡ: ದಸರಾ ಹಬ್ಬದ ಅಂಗವಾಗಿ ಧಾರವಾಡದಲ್ಲಿ ಮಂಗಳವಾರ ಅದ್ಧೂರಿಯಿಂದ ಜಂಬೂ ಸವಾರಿ ಉತ್ಸವ ನೆರವೇರಿತು.
ಪ್ರತಿವರ್ಷ ಮೂಲ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಈ ಜಂಬೂ ಸವಾರಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಕೃತಕ ಆನೆ ಮೇಲೆ ಅಂಬಾರಿಯನ್ನಿಟ್ಟು ಮೆರವಣಿಗೆ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಎರಡು ಜೀವಂತ ಆನೆಗಳ ಮೂಲಕ ಜಂಬೂ ಸವಾರಿ ಉತ್ಸವ ಅದ್ಧೂರಿಯಿಂದ ನೆರವೇರಿದೆ.
ಧಾರವಾಡದ ಗಾಂಧಿನಗರ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಒಂದು ಆನೆ ಮೇಲೆ ಬಂಡೆಮ್ಮ ದೇವಿಯ ಮೂರ್ತಿ ಇನ್ನೊಂದು ಆನೆಯ ಮೇಲೆ ದುರ್ಗಾದೇವಿ ಮೂರ್ತಿಯನ್ನಿಟ್ಟು ಮೆರವಣಿಗೆ ಮಾಡಲಾಯಿತು. ಅಂಬಾರಿ ಹೊತ್ತ ಆನೆಗಳು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಗಮನಸೆಳೆದವು. ಮೆರವಣಿಗೆಯ ಜೊತೆಗೆ ಸಾರೋಟಿನಲ್ಲಿ ಕೋಡಿಮಠದ ಸ್ವಾಮೀಜಿಗಳ ಮೆರವಣಿಗೆಯನ್ನೂ ಮಾಡಲಾಯಿತು.
ಇನ್ನು ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು, ಗೊಂಬೆ ಕುಣಿತದವರು, ಡೊಳ್ಳಿನ ಮೇಳದವರು ಸೇರಿದಂತೆ ಅನೇಕ ಕಲಾ ತಂಡದವರು ಪಾಲ್ಗೊಂಡು ಜಂಬೂ ಸವಾರಿಯ ಮೆರಗು ಹೆಚ್ಚಿಸಿದರು. ಇನ್ನು ಧಾರವಾಡ ಗಾಂಧಿನಗರದಿಂದ ಆರಂಭವಾದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನಸೆಳೆಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/10/2022 10:34 pm