ಹುಬ್ಬಳ್ಳಿ: ಅಡ್ಡ ಅಡ್ಡ ಮಳೆ ಬಂದ ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ. ಗೊಡ್ಡುಗಳೆಲ್ಲ ಹೈನಾಗಿ, ಊರಿನ ಗೌಡರ ಷಡ್ಡಿಯ ಮೇಲೆ ಸಿರಿ ಬರಲಿ. ಈ ಜಾನಪದ ಹಾಡನ್ನು ಕೇಳುತ್ತಲೇ ಕಿವಿ ನೆಟ್ಟಗಾಗುವುದು ಮಾತ್ರವಲ್ಲದೆ ಮನಸ್ಸಿಗೆ ಏನೋ ಒಂಥರಾ ಖುಷಿ. ಇದೆಲ್ಲದಕ್ಕೂ ಸಾಕ್ಷಿಯಾಗಿರುವುದು ನಮ್ಮ ಉತ್ತರ ಕರ್ನಾಟಕ ಭಾಗದ ಜೋಕುಮಾರನ ಆಚರಣೆ.
ಹೌದು.. ಧಾರವಾಡ, ಗದಗ, ಹಾವೇರಿ ಭಾಗದಲ್ಲಿ ಗಣಪತಿ ವಿಸರ್ಜನೆ ಬಳಿಕ ಆಚರಣೆಗೆ ಬರುವ ಜೋಕುಮಾರ ಸ್ವಾಮಿ ಮಳೆ ಹಾಗೂ ಬೆಳೆಯನ್ನು ಸಮೃದ್ಧಿ ಮಾಡುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸುವ ಆರಾಧ್ಯದೈವವಾಗಿದ್ದಾನೆ ಎಂಬುವುದು ಸಾರ್ವಜನಿಕರ ನಂಬಿಕೆಯಾಗಿದೆ. ನಾಲ್ಕೈದು ಜನ ಮಹಿಳೆಯರು ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನಿಟ್ಟುಕೊಂಡು ಓಣಿ ಓಣಿ ಸುತ್ತುವ ಮೂಲಕ ವಿಶೇಷ ಆಚರಣೆಗೆ ಮುಂದಾಗುತ್ತಿದ್ದಾರೆ.
ಇನ್ನೂ ಏಳು ದಿನಗಳ ಕಾಲ ಆಚರಣೆಗೆ ಬರುವ ಜೋಕುಮಾರನ ಅಳಲ ಅಂಬಲಿಯನ್ನು ಹೊಲದಲ್ಲಿ ಹಾಕುವ ಮೂಲಕ ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬುವುದು ಜನರ ನಂಬಿಕೆಯಾಗಿದೆ. ಮನೆಯ ಬಾಗಿಲಿಗೆ ಬರುವ ಜೋಕುಮಾರನಿಗೆ ಸಾರ್ವಜನಿಕರು ದವಸ ಧಾನ್ಯಗಳನ್ನು ನೀಡುವ ಮೂಲಕ ತಮ್ಮ ಹರಕೆ ಕಟ್ಟಿಕೊಳ್ಳುವುದು ಇಂದಿಗೂ ಕೂಡ ರೂಡಿ ಇದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2022 06:02 pm