ಹುಬ್ಬಳ್ಳಿ: ನೀ ಕೊಡೆ.. ನಾ ಬಿಡೆ.. ಎನ್ನುವಂತಾಗಿದೆ ಮೂರು ಸಾವಿರಮಠದ ಆಸ್ತಿ ಪರಭಾರೆ ವಿಚಾರ. ವಿವಾದ ವಿಕೋಪಕ್ಕೆ ಹೋಗುತ್ತಿದ್ದಂತೆ ಮೌನ ಮುರಿದಿದ್ದ ಕೆಎಲ್ ಇ ಸಂಸ್ಥೆಯವರು ಕಾಲೇಜು ಕಟ್ಟಿಯೇ ತೀರುವುದಾಗಿ ಹೇಳಿದರು. ಇದರಿಂದ ಕೆರಳಿದ ದಿಂಗಾಲೇಶ್ವರ ಶ್ರೀ ನಾನು ಗಲ್ಲಿಗೇರಿದ್ರು ಸರಿ ಮಠದ ಆಸ್ತಿ ಉಳಿಸಿಯೆ ಸಿದ್ಧ.. ಎಂದು ಹೇಳುವ ಮೂಲಕ ವಿವಾದಕ್ಕೆ ಮತ್ತಷ್ಟು ಕಿಡಿ ಹೊತ್ತಿಸಿದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಆಸ್ತಿ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿರುವ ದಿಂಗಾಲೇಶ್ವರ ಶ್ರೀ ಮತ್ತು ಕೆಎಲ್ ಇ ಸಂಸ್ಥೆ ನಡುವೆ ನಡೆಯುತ್ತಿರುವ ಗುದ್ದಾಟ ವಿಕೋಪಕ್ಕೆ ಹೋಗುತ್ತಿದೆ. ಇಬ್ಬರ ನಡುವಿನ ಆರೋಪ ಪ್ರತ್ಯಾರೋಪ, ಸವಾಲುಗಳಿಂದ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಗದಂತಾಗಿದೆ. ಗಬ್ಬೂರು ಬಳಿ ಮೂರು ಸಾವಿರಮಠದದಿಂದ ದಾನವಾಗಿ ಪಡೆದಿರುವ 24 ಎಕರೆ ಭೂಮಿಯಲ್ಲಿ ಮೆಡಿಕಲ್ ಕಾಲೇಜ್ ಕಟ್ಟುವುದು ಶತಸಿದ್ದ. ಭೂಮಿಯನ್ನು ಮರಳಿ ಕೊಡುವ ಪ್ರಶ್ನೆಯೆ ಇಲ್ಲ ಎಂದು ಹೇಳಿದ್ದ ಪ್ರಭಾಕರ್ ಕೋರೆ 600 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು, ಒಂದುವರೆ ವರ್ಷದಲ್ಲಿ ಕಾಲೇಜು ಉದ್ಘಾಟನೆ ಮಾಡುತ್ತೆವೆಂದು ಹೇಳಿದರು. ಅಷ್ಟೇ ಅಲ್ಲದೆ ದಿಂಗಾಲೇಶ್ವರ ಶ್ರೀ ವಿರುದ್ದ ಕಿಡಿಕಾರಿದ್ದ ಪ್ರಭಾಕರ್ ಕೋರೆ, ಅವರು ಯಾರು ಎನ್ನುವುದು ನನಗೆ ಗೊತ್ತೆ ಇಲ್ಲ, ಹಾದಿಬೀದಿಲಿ ಹೋಗುವ ಸ್ವಾಮೀಜಿಗಳಿಗೆ ನಾನು ಉತ್ತರ ನೀಡಲ್ಲ, ಮೂರುಸಾವಿರ ಮಠಕ್ಕೂ ಅವರಿಗೂ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದಲ್ಲದೆ, ಕೆಎಲ್ಇ ವಿಚಾರಕ್ಕೆ ಬಂದರೇ ಕಾನೂನು ಮೂಲಕ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಅದ್ಯಾವಾಗ ಪ್ರಬಾಕರ್ ಕೋರೆ ದಿಂಗಾಲೇಶ್ವರ ಶ್ರೀ ವಿರುದ್ದ ಗುಡುಗಿದ್ರೋ ಇದರಿಂದ ಕೆರಳಿದ ದಿಂಗಾಲೇಶ್ವರ ಶ್ರೀ ಇಂದು ಕೋರೆಗೆ ತಿರುಗೇಟು ನೀಡಿದ್ದಾರೆ. ನನ್ನನ್ನು ಮೂರು ಸಾವಿರಮಠದ ಉತ್ತರಾಧಿಕಾರಿಯನ್ನಾಗಿ ಮಾಡುವ ಪತ್ರಕ್ಕೆ ಕೋರೆಯವರು ಸಹಿ ಹಾಕಿದ್ದಾರೆಂದು ದಾಖಲೆ ಬಿಡುಗಡೆ ಮಾಡುವ ಮೂಲಕ ಮಠಕ್ಕೆ ದಿಂಗಾಲೇಶ್ವರ ಶ್ರೀ ಗೆ ಏನು ಸಂಬಧ ಎನ್ನುವುದಕ್ಕೆ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ಕೋರೆಯವರ ಬೆದರಿಕೆಗೆ ಹೆದರುವ ಸ್ವಾಮಿಜಿ ನಾನಲ್ಲ, ಕಾನೂನಿನಲ್ಲಿ ನಾನು ತಪ್ಪಿತಸ್ಥ ಎಂದು ಸಾಬೀತು ಆದರೆ ಗಲ್ಲಿಗೇರಲು ಸಿದ್ದನಿದ್ದೆನೆಂದು ಕೋರೆ ವಿರುದ್ದ ಹರಿಹಾಯ್ದಿದ್ದಾರೆ. ಮಠದ ಆಸ್ತಿಯನ್ನು ಪ್ರಾಣ ಹೋದರು ಸರಿ ಉಳಿಸುತ್ತೆನೆಂದು ದಿಂಗಾಲೇಶ್ವರ ಶ್ರೀ ಹೇಳಿದ್ದಾರೆ.
ಸದ್ಯಕ್ಕಂತೂ ಮೂರು ಸಾವಿರ ಮಠದ ಆಸ್ತಿ ವಿವಾದ ಬಗೆ ಹರಿಯುವ ಲಕ್ಷಣ ಕಾಣುತ್ತಿಲ್ಲ. ಆಸ್ತಿ ವಿವಾದ ತಾರಕಕ್ಕೆ ಏರುತ್ತಿದ್ದು ಭಕ್ತರಲ್ಲಿ ಸಾಕಷ್ಟು ಗೊಂದಲ ಮೂಡಿದೆ. ಮುಂದಿನ ದಿನಗಳಲ್ಲಿ ವಿವಾದ ಅದ್ಯಾವ ತಿರುವು ಪಡೆದುಕೊಳ್ಳುತ್ತೊ ಕಾದು ನೋಡಬೇಕಿದೆ..
Kshetra Samachara
11/02/2021 06:37 pm