ಧಾರವಾಡ: ಹಂಗರಕಿ ದೇಸಾಯಿ ಮನೆತನ ಎಂದರೆ ಸುತ್ತಮುತ್ತಲ ಹತ್ತೂರಿಗೆ ಹೆಸರಾದ ಮನೆತನ. ದಾನ, ಧರ್ಮ ಮಾಡುವುದರಲ್ಲಿ ಈ ಕುಟುಂಬ ಎತ್ತಿದ ಕೈ. ಈ ಹಂಗರಕಿ ದೇಸಾಯಿ ಮನೆತನ ಗರಗದ ಮಡಿವಾಳಪ್ಪನ ಗದ್ದುಗೆಗೆ ಪೂರ್ವಜರ ಕಾಲದಲ್ಲೇ ಭೂಮಿ ದಾನ ಮಾಡಿದೆ. ತಡಕೋಡ ಕೆರೆ ಹಾಗೂ ಅಲ್ಲಿನ ಶಾಲೆಗೆ ಭೂಮಿ ದಾನ ಮಾಡಿ ಹೆಸರಾಗಿದೆ. ಈಗ ಅಯೋಧ್ಯೆಯಲ್ಲಿ ವಿರಾಜಮಾನರಾಗಲಿರುವ ರಾಮ ಮಂದಿರಕ್ಕೆ ದೇಣಿಗೆ ನೀಡಿ ದಾನ ಮಾಡುವುದರಲ್ಲಿ ತಮ್ಮ ಕುಟುಂಬ ಎತ್ತಿದ ಕೈ ಎಂದು ಮತ್ತೊಮ್ಮೆ ಸಾಬೀತು ಮಾಡಿದೆ.
ಹೌದು! ಸರಳ ಹಾಗೂ ಸಜ್ಜನಿಕೆ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದ ಪ್ರಸ್ತುತ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ತಂದೆ ಅಯ್ಯಪ್ಪ ದೇಸಾಯಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಬರೊಬ್ಬರಿ 1,11,111 ಲಕ್ಷ ದೇಣಿಗೆ ನೀಡಿದ್ದಾರೆ. ಇನ್ನು ಅವರ ಪುತ್ರ ಶಾಸಕ ಅಮೃತ ದೇಸಾಯಿ ಕೂಡ 1,11,111 ಲಕ್ಷ ದೇಣಿಗೆ ನೀಡಿದ್ದಾರೆ. ಇವರ ಜೊತೆಗೆ ಅಮೃತ ದೇಸಾಯಿ ಅವರ ಸಹೋದರ ಅಶೋಕ ದೇಸಾಯಿ ಅವರು 51,000 ಸಾವಿರ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.
ಬುಧವಾರ ರಾಮಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನದ ವೇಳೆ ಹಂಗರಕಿಯಲ್ಲೇ ದೇಸಾಯಿ ಮನೆತನ ಈ ದೇಣಿಗೆ ನೀಡಿದೆ. ಡಾ. ಸಂಗನಗೌಡ ರಾಮನಗೌಡರ, ಶ್ರೀಧರ ನಾಡಿಗೇರ, ಪ್ರಭಾಕರ ದೇಶಪಾಂಡೆ, ನರಸಪ್ಪ ಭಟ್ಟಂಗಿ ಹಾಗೂ ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
27/01/2021 07:01 pm