ಸಂಗೀತ ಸಾಧನೆಯ ಮೂಲಕ ವಿಶ್ವವ್ಯಾಪಿ ಹೆಸರಾದ ಸವಾಯಿ ಗಂಧರ್ವರ ಸ್ಮಾರಕ ಭವನದ ಅವ್ಯವಸ್ಥೆ ಹಾಗೂ ಅಲ್ಲಿ ಅಕ್ರಮ ಚಟುವಟಿಕೆಗಳೇ ಬಿಡಾರ ಹೂಡಿದ್ದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿ ಬಿತ್ತರಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದಿತ್ತು.
ಇದಲ್ಲದೆ, ಸವಾಯಿ ಗಂಧರ್ವರ ಪುಣ್ಯಸ್ಮರಣೆ ಕಾರ್ಯಕ್ರಮ ಹತ್ತಿರವಿದ್ದರೂ ಸವಾಯಿ ಗಂಧರ್ವರ ಸ್ಮಾರಕ ಭವನ ಮಾತ್ರ ಅಭಿವೃದ್ಧಿಯಿಂದ ದೂರವಾಗಿ ಕುಡುಕರ, ಸಮಾಜಘಾತುಕರ ಅಡ್ಡೆಯಾಗಿ ಮಾರ್ಪಾಟಾಗಿತ್ತು. ನಿರ್ವಹಣೆ ಇಲ್ಲದೆ ಪರಿಸರದಲ್ಲಿ ಎಲ್ಲೆಡೆ ಕಸ-ತ್ಯಾಜ್ಯ ರಾಶಿ ಬಿದ್ದು, ದಟ್ಟ ಪೊದೆ ಬೆಳೆದಿತ್ತು. ಮೇಲ್ಚಾವಣಿಯ ಫೈಬರ್ ಕುಸಿದು, ಸ್ಮಾರಕದ ಗ್ಲಾಸ್ ಒಡೆದು ವಿರೂಪಗೊಂಡ ಬಗ್ಗೆ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ವರದಿ ಪ್ರಸಾರ ಮಾಡಲಾಗಿತ್ತು.
ಈ ವರದಿ ಗಮನಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಸ್ಮಾರಕ ಭವನವನ್ನು ಸವಾಯಿ ಗಂಧರ್ವರ ಪುಣ್ಯಸ್ಮರಣೆ ಅಂಗವಾಗಿ ಅಭಿವೃದ್ಧಿಪಡಿಸಿ ಕಾರ್ಯಕ್ರಮ ಸಹ ಯಶಸ್ವಿಯಾಗಿಸಿ, ಸಂಗೀತ ಪ್ರೇಮಿಗಳ ಆಕ್ರೋಶ ಶಾಂತಗೊಳಿಸಿದ್ದಾರೆ.
ಇದೀಗ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿನ ಕಸ ಸಹಿತ ಅನೈರ್ಮಲ್ಯ, ದುರ್ನಾತ ಮಾಯವಾಗಿ ಅಲ್ಲೊಬ್ಬ ಸಿಬ್ಬಂದಿಯೂ ನೇಮಕವಾಗಿದ್ದು, ಸ್ವಚ್ಛತೆಯ ಜತೆಗೆ ಕಾವಲಿಗಿದ್ದಾರೆ. 2 ಕೋಟಿ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸವಾಯಿ ಗಂಧರ್ವರ ಸ್ಮಾರಕ ಭವನ ಸದಾ ಶೋಭಿಸುತ್ತಿರಲಿ ಎಂಬುದು ಕನ್ನಡಿಗರ ಹಾರೈಕೆ.
ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್: ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/09/2022 07:09 pm