ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಪ್ಪುಗಟ್ಟಿದ ಬದುಕಲ್ಲಿ ಮೆರೆದ ಮಾನವೀಯತೆ!! ಐಸ್....ಐಸ್.......ಐಸ್.....ಎಲ್ನೋಡಿ ಐಸ್....

ಹೌದು, ಕಳೆದ ವಾರ ಭಾರೀ ಹಿಮಪಾತದಿಂದಾಗಿ ಪ್ರಪಂಚದ ದೊಡ್ಡಣ್ಣನ್ನೆಂದೇ ಕರೆಯಿಸಿಕೊಳ್ಳುವ ಅಮೇರಿಕ ಅಕ್ಷರಶ: ನಡುಗಿ ಹೋಗಿತ್ತು....ನಲುಗಿದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಡೀ ಟೆಕ್ಸಾಸ್ ರಾಜ್ಯವೇ ಹಿಮಾಚ್ಛಾದಿತವಾಗಿ ನೋಡಲು ಒಂದು ದೊಡ್ಡ ಬಿಳಿಯ ರಗ್ಗಿನಂತೆ ಸುಂದರವಾಗಿ ಕಾಣುತ್ತಿತ್ತಾದರೂ ಒಮ್ಮೆಲೇ ಬೀಸತೊಡಗಿದ ಚಳಿ ಮಿಶ್ರಿತ ಬಿರುಗಾಳಿ ನಿತ್ಯದ ಬದುಕನ್ನೇ ಹೆಪ್ಪುಗಟ್ಟಿಸಿತ್ತು.

ಅದರಲ್ಲೂ ಟೆಕ್ಸಾಸ್ ನ ಆಸ್ಟಿನ್ ನಗರದಲ್ಲಿ ಮಳೆಯೋಪಾದಿಯಲ್ಲಿ ಸುರಿದ ಹಿಮಪಾತದ ತೀವ್ರತೆಯೆಷ್ಟಿತ್ತೆಂದರೆ ನೀರಿನ ಪೈಪುಗಳು ಒಡೆದವು... ವಿದ್ಯುತ್ ಸಂಪರ್ಕ ಕಡಿತಗೊಂಡಿತು....ಹಿಮದ ಹಾಸಿಗೆಯಿಂದಾಗಿ ರಸ್ತೆಗಳು ಕಾಣದಂತೆ ಮಾಯವಾದವು.... ಮುಖ್ಯ...ಎಲ್ಲಕ್ಕಿಂತ ಮುಖ್ಯ ದಾಖಲೆಯ ಅತೀ ಕಡೆಮೆ ಉಷ್ಣಾಂಶದಿಂದಾಗಿ ನಿತ್ಯದ ಬದುಕೇ ತತ್ವಾರಗೊಂಡು ಹೋಯಿತು. ಫೆಬ್ರುವರಿ 13-14ರ 'ವೀಕೆಂಡ್' ಸಂಭ್ರಮಿ ಸಿದವರೆಲ್ಲ 15ರ ಮುಂಜಾನೆಯ ಈ ಹಠಾತ್ ಬೆಳವಣಿಗೆಯಿಂದ ಬರಸಿಡಿಲು ಬಡಿದಂತಾಗಿ ತತ್ತರಿಸಿಹೋದರು. ಹಸಿವು ನೀರಡಿಕೆಗಳಿಂದಾಗಿ ಹತಾಶೆ ಮೂಡುತ್ತಿದ್ದಂತೆ ತತ್ ಕ್ಷಣದಲ್ಲಿ ಮಿಲಿಯನ್ ಡಾಲರ್ ಸವಾಲುಗಳು ಅಲ್ಲಿಯ ಕನ್ನಡಿಗ-ಭಾರತೀಯರೂ ಸೇರಿದಂತೆ ಎಲ್ಲರಿಗೂ ಎದುರಾದದ್ದಂತೂ ದಿಟ!

ಆಗ ಆರಂಭವಾಯಿತು ನೋಡಿ....ಸಂದಿಗ್ಧತೆಯ ಈ ತೀವ್ರತೆ...ಭೀಕರತೆಗಳನ್ಶು ಮೆಟ್ಪಿ ನಿಲ್ಲುವ ಮನೋಔದಾರ್ಯತೆ-ಮಾನವೀಯತೆಗಳು...! ಜಾತಿ-ಮತ ಪಂಥಗಳನ್ನು ಬದಿಗೊತ್ತಿ ಸ್ನೇಹಿತರು-ಪರಿಚಯಸ್ಥರು ನೆರೆಹೊರೆಯವರು ಮುಂದೆ ಬಂದರು ಸಹಾಯ ಸಹಕಾರದ ಸಿದ್ಧ ಹಸ್ತದೊಂದಿಗೆ!! ತಾವೂ ಅದೇ ಪರಿಸ್ಥಿತಿಯಲ್ಲಿದ್ದರೂ ಇತರರಿಗೆ 4-5 ದಿನ ತಿಂಡಿ ಊಟ ಕೊಟ್ಪು ಆಶ್ರಯ ನೀಡಿದ ಮಹಾಶಯರು, ಸಣ್ಣ ಸಣ್ಣ ಪಾತ್ರೆ-ಪಡಗಗಳಲ್ಲಿ ನೀರು ಸಂಗ್ರಹಿಸಿದ್ದು, ಐಸ್ ಗಡ್ಡೆಗಳನ್ನೇ ಕರಗಿಸಿ ಬಳಕೆ ಮಾಡಿದ್ದು, ಹಿರಿಯರು.....

ರೋಗಿಗಳು.....ಗರ್ಭಿಣಿಯರು.. ಬಾಣಂತಿಯರು..ಮಕ್ಕಳೆಲ್ಲರಿಗೆ ಹಿತವಾಗಿ ಆರೈಕೆ ಮಾಡಿದ್ದು, ಎಲ್ಲವೂ ಹೊಸ ಇತಿಹಾಸವನ್ನೇ ಬರೆದು ಎಂಥ ಕಠಿಣ ಹೃದಯರನ್ನೂ ಕರಗಿಸಿತಷ್ಪೇ ಅಲ್ಲದೇ ಇತರ ದೇಶಗಳಿಗೂ ಮಾದರೀಯವಾಗಿ ಹೊಸ ಭಾಷ್ಯೆ ಬರೆಯಿತು!!! ಈ ದಿಶೆಯಲ್ಲಿ ಆಸ್ಟಿನ್ ಕನ್ನಡ ಸಂಘ, ಮಧ್ವ ಸಂಘ, ಹಿಂದೂ ಸ್ವಯಂ ಸೇವಕ ಸಂಘ, ತಮಿಳ್ ಸಂಘಗಳಲ್ಲದೇ ಇತರೇ ಸಂಘ-ಸಂಸ್ಥೆಗಳ ಅಹರ್ನಿಶಿ ಸೇವೆಯನ್ನು ಸಾರ್ವಜನಿಕರು ಮನದುಂಬಿ ಕೊಂಡಾಡಿದರು.

ಆಸ್ಟಿನ್ ಈಗ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ.... ಆ..ಸಮಯ...ಜಗವೆಲ್ಲ ಐಸ್ ಮಯ....ನೋಡಲದೆಷ್ಟು ಸುಂದರ...ಅನುಭವಿಸುವುದು ಮಾತ್ರ ಕಡು ಕಷ್ಟಕರ....ಎಂದು ಅಲ್ಲಿಯವರಿಗೆ ಅನಿಸಿರಲಿಕ್ಕೆ ಸಾಕು!!

(ಟೆಕ್ಸಾಸ್ ನ ಆಸ್ಟಿನ್ ನಗರದಲ್ಲಿದಲ್ಲಿ ವಾಸಿಸುತ್ತಿರುವ ಪಬ್ಲಿಕ್ ನೆಕ್ಸ್ಟ್ ಓದುಗಾರಾದ ಶ್ರೀಮತಿ ಅಂಜನಾ ಪವನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.)

● ವಿಶೇಷ ವರದಿ:

ನಾರಾಯಣ ವೆಂ ಭಾದ್ರಿ. ನವನಗರ, ಹುಬ್ಬಳ್ಳಿ.

(ಮೋ) 92432 48972.

Edited By :
Kshetra Samachara

Kshetra Samachara

22/02/2021 08:42 am

Cinque Terre

18.09 K

Cinque Terre

0