ಧಾರವಾಡ: ಬಿ.ಎಸ್.ಯಡಿಯೂರಪ್ಪನವರು ಮಾಡಿದಷ್ಟು ಪಾದಯಾತ್ರೆಯನ್ನು ಯಾರೂ ಮಾಡಿಲ್ಲ. ಅವರು ಮಾಡಿದಷ್ಟು ಸೈಕಲ್ ಯಾತ್ರೆಯನ್ನು ಯಾರೂ ಮಾಡಲಿಕ್ಕಾಗದು. ಕಾಂಗ್ರೆಸ್ ಪಾದಯಾತ್ರೆಯನ್ನು ಬಿಜೆಪಿಯಿಂದಲೇ ಕಲಿತುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಪಾದಯಾತ್ರೆ ಈಗ ಆರಂಭವಾಗಿದೆ. ಬಿಜೆಪಿ ಬೆಳೆದಿದ್ದೇ ಪಾದಯಾತ್ರೆಯಿಂದ. ನಾವು ಅಧಿಕಾರಕ್ಕೆ ಬಂದಿರುವುದೇ ಯಾತ್ರೆಯಿಂದ. ಯಡಿಯೂರಪ್ಪ ಎರಡು ಕಿಲೋ ಮೀಟರ್ ನಡೆಯಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಯಡಿಯೂಪ್ಪನವರು ಮಾಡಿದಷ್ಟು ಪಾದಯಾತ್ರೆಯನ್ನು ಯಾರೂ ಮಾಡಿಲ್ಲ. ಸಿದ್ದರಾಮಯ್ಯ ಭಿಕ್ಷೆ ಬೇಡಿ, ಕಾಲು ಬಿದ್ದು ಸಿಎಂ ಆದವರು ಎಂದರು.
ದೇವೇಗೌಡರ ಕಾಲಿಗೆ ಅಡ್ಡ ಬಿದ್ದು ನಮಸ್ಕಾರ ಮಾಡಿ ಸಿದ್ದರಾಮಯ್ಯ ರಾಜಕಾರಣದಲ್ಲಿ ಬೆಳೆದಿದ್ದಾರೆ. ಇಂದಿರಾ ಗಾಂಧಿಗೆ ಕೆಟ್ಟ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು. ಕೊನೆಗೆ ಸೋನಿಯಾ ಗಾಂಧಿ ಅವರ ಕಾಲು ಬಿದ್ದು ಸಿಎಂ ಆದರು. ಸಿದ್ದರಾಮಯ್ಯಮವರಿಗೆ ಅರಳು ಮರಳು ಅಲ್ಲ, ಅವರಿಗೆ ಮರುಳೇ ಹಿಡಿದಿದೆ. ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ.
ಕಳೆದ 5 ವರ್ಷದಲ್ಲಿ ಕೆಟ್ಟ ಶಬ್ದ ಬಳಕೆ ಮಾಡುತ್ತಿದ್ದಾರೆ. ದುರಹಂಕಾರ ತೋರಿಸುತ್ತಿದ್ದಾರೆ. ಅವರಿಗೆ ಸ್ಥಿರತೆ ಇಲ್ಲ. ನಾಳೆ ಡಿಕೆಶಿಯನ್ನು ಸಿಎಂ ಮಾಡ್ತಾರೋ ಅಥವಾ ಖರ್ಗೆ ಅವರನ್ನು ಸಿಎಂ ಮಾಡ್ತಾರೋ ಎಂಬ ಭಯ ಸಿದ್ದರಾಮಯ್ಯನವರಿಗಿದೆ. ಈ ಭಯವೇ ಅವರನ್ನು ಹುಚ್ಚರನ್ನಾಗಿ ಮಾಡಿದೆ ಎಂದರು.
ರಾಹುಲ್ ಗಾಂಧಿ ಮೋದಿ ಅವರ ಪಾದದ ಧೂಳಿಗೂ ಸಮಾನರಲ್ಲ ಎಂಬ ಬಿಎಸ್‌ವೈ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಟೀಲ್, ರಾಹುಲ್ ಗಾಂಧಿ ಓರ್ವ ಸಾಧಾರಣ ಎಂಪಿ. ಅವರು ಕಾಂಗ್ರೆಸ್‌ಗೆ ನಾಯಕರಾಗಿರಬಹುದು. ಮೋದಿ ಈ ದೇಶದ ಪ್ರಧಾನಿ. ಇಂದಿರಾಗಾಂಧಿ ಪ್ರಧಾನಿ ಇದ್ದಾಗ ವಾಜಪೇಯಿ ಅವರು ಒಮ್ಮೆಯೂ ಏಕವಚನ ಬಳಸಲಿಲ್ಲ.
ವಿರೋಧ ಪಕ್ಷಗಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಾಜಪೇಯಿ ತೋರಿಸಿಕೊಟ್ಟಿದ್ದಾರೆ. ಇಂದು ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಅದೇ ರೀತಿ ಯಡಿಯೂರಪ್ಪ ಹೇಳಿದ್ದೂ ಸರಿಯಿದೆ. ನೆಹರೂ ಗಾಂಧಿ ಕಾಲಿಗೆ ಸಮಾನರಾಗುವುದಿಲ್ಲ ಎಂಬುದು ತಪ್ಪಾಗುತ್ತದೆ. ಸಿದ್ದರಾಮಯ್ಯ ಸಿಎಂ ಆದವರು ಅವರು ಗೌರವದಿಂದ ನಡೆದುಕೊಂಡರೆ ಉಳಿದವರೂ ಗೌರವದಿಂದ ನಡೆದುಕೊಳ್ಳುತ್ತಾರೆ ಎಂದರು.
ಕಟೀಲ್ ಅವರು ವಿದೂಷಕ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಯ್ಯ ವಿಲ್ಲಾನಾ? ಎಂದು ಮರು ಪ್ರಶ್ನಿಸಿದರು. ಹಿಜಾಬ್ ವಿಚಾರ ನ್ಯಾಯಾಲಯದಲ್ಲಿರುವುದರಿಂದ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 02:06 pm