ಧಾರವಾಡ: ಭಾರತಕ್ಕೆ ರೈಲುಗಳನ್ನು ಆಮದು ಮಾಡಿಕೊಳ್ಳಬೇಕು ಎಂದುಕೊಂಡಾಗ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಮದಿಗೆ ಅವಕಾಶ ಕೊಡದೇ ನಮ್ಮ ದೇಶದ ಎಂಜಿನಿಯರ್‌ಗಳೇ ರೈಲು ಸಿದ್ದಪಡಿಸಲಿ ಎಂದು ಈ ದೇಶದ ಎಂಜಿನಿಯರ್‌ಗಳಿಗೆ ಮುಕ್ತ ಅವಕಾಶ ನೀಡಿ 2017ರಲ್ಲಿ ರೈಲುಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಅದರ ಪ್ರತಿಫಲವಾಗಿ 2019ಕ್ಕೆ ವಂದೇ ಭಾರತ್ ರೈಲುಗಳು ಹೊರಗಡೆ ಬಂದು ಇದೀಗ 18 ಲಕ್ಷ ಕಿಲೋ ಮೀಟರ್ ಓಡಿವೆ ಎಂದು ಕೇಂದ್ರದ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಲ್ದರ್ಜೆಗೇರಿದ ಧಾರವಾಡದ ರೈಲು ನಿಲ್ದಾಣವನ್ನು ಉದ್ಘಾಟನೆಗೊಳಿಸಿದ ಬಳಿಕ ಕನ್ನಡದಲ್ಲೇ ಮಾತು ಆರಂಭಿಸಿ, ಧಾರವಾಡ ಮಹಾಜನತೆಗೆ ನನ್ನ ನಮಸ್ಕಾರಗಳು, ಧಾರವಾಡ ಪೇಡಾ ತಿನ್ನಬೇಕು ಎನ್ನುವ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು.
ಪ್ರಹ್ಲಾದ ಜೋಶಿ ನನ್ನ ಗುರು. ಅವರು ಪಾರ್ಲಿಮೆಂಟ್‌ನಲ್ಲಿ ಹೇಗಿರಬೇಕು ಯಾವ ರೀತಿ ಮಾತಾಡಬೇಕು ಎಂಬುದನ್ನು ಅವರು ಕಲಿಸಿಕೊಡುತ್ತಾರೆ. ನನ್ನನ್ನು ತಮ್ಮನಂತೆ ಕಾಣುತ್ತಾರೆ. ಧಾರವಾಡ ದೊಡ್ಡ ಸಾಂಸ್ಕೃತಿಕ ನಗರ. ಈ ಒಂದೇ ಪ್ರದೇಶದ ಐದು ಜನರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು,ನಿಜಕ್ಕೂ ಅಚ್ಛರಿ ಸಂಗತಿ. ಒಂದು ಕಡೆ ಸಾಹಿತ್ಯ, ಇನ್ನೊಂದು ಕಡೆ ಸಂಗೀತ ಮತ್ತೊಂದು ಕಡೆ ಪ್ರಹ್ಲಾದ ಜೋಶಿ ಹಾಗೂ ಧಾರವಾಡ ಪೇಡಾ ಉತ್ತಮವಾದ ಅವಿನಾಭಾವ ಸಂಬಂಧ ಹೊಂದಿವೆ ಎಂದು ಅಶ್ವಿನಿ ನಸುನಕ್ಕರು.
ನರೇಂದ್ರ ಮೋದಿ ಅವರು ವಂದೇ ಭಾರತ ರೈಲುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ಎಂದಿದ್ದಾರೆ. ಹೀಗಾಗಿ 75 ರೈಲುಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಜೋಶಿ ಅವರು ಧಾರವಾಡ ಪೇಡಾ ಕೊಟ್ಟಿದ್ದಾರೆ. ನಾನು ಧಾರವಾಡಕ್ಕೆ ವಂದೇ ಭಾರತ್ ರೈಲು ನೀಡುತ್ತೇನೆ. ಈ ಪೇಡಾ ತೆಗೆದುಕೊಂಡು ಮೋದಿ ಅವರ ಬಳಿ ಹೋಗಿ ಧಾರವಾಡಕ್ಕೆ ವಂದೇ ಭಾರತ್ ರೈಲು ನೀಡುವಂತೆ ಮನವಿ ಮಾಡುತ್ತೇನೆ ಎಂದರು.
ವಂದೇ ಭಾರತ ರೈಲಿನಲ್ಲಿ ಕುಳಿತರೆ ಒಳ್ಳೆಯ ಅನುಭವ ಬರುತ್ತದೆ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡುತ್ತವೆ. ಇದೀಗ ಈ ರೈಲು ನೋಡಿ ವಿಶ್ವವೇ ಅಲುಗಾಡಲು ಆರಂಭಿಸಿದೆ. ಇದೆಲ್ಲ ಮೋದಿ ಅವರ ತಾಕತ್ತು. ಜೋಶಿ ಅವರು ಐಐಟಿ, ತ್ರಿಬಲ್ ಐಐಟಿ, ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ ಸೇರಿದಂತೆ ಅನೇಕ ಯೋಜನೆಗಳನ್ನು ತಂದುಕೊಟ್ಟಿದ್ದಾರೆ. ಜೋಶಿ ನಿಧಾನವಾಗಿ ಬಂದು ಎರಡು ಪೇಡಾ ತಿನ್ನಿಸಿ ಒಂದೊಂದು ಯೋಜನೆ ಪಡೆದುಕೊಂಡು ಹೋಗುತ್ತಾರೆ. ಅವರು ತುಂಬ ಪವರ್‌ಫುಲ್ ಮಿನಿಸ್ಟರ್ ಎಂದರು.
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ವಿರೋಧಿಸುತ್ತಿರುವವರಿಗೆ ನೀವೆಲ್ಲ ಮನವಿ ಮಾಡಬೇಕು. ಪರಿಸರ, ವನ್ಯ ಮೃಗಗಳನ್ನು ಸಂರಕ್ಷಣೆ ಮಾಡಬೇಕಿದೆ. ಎಲ್ಲರ ಬೇಡಿಕೆಯನ್ನೂ ನಾನು ಈಡೇರಿಸುತ್ತೇನೆ. ನಿಜಾಮುದ್ದೀನ್ ರೈಲಿಗೆ ಸವಾಯಿ ಗಂಧರ್ವ ಹೆಸರು ಇಡುವ ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದ ಸಚಿವರು, ಹಳಿಯಾಳ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಗುವುದು ಎಂದು ವಾಟ್ಸಪ್‌ನಲ್ಲಿ ಬಂದಿದ್ದ ಸಂದೇಶವನ್ನು ಸಚಿವರು ಓದಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 06:26 pm