ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಮೇಯರ್ ಅವರು ಜನರಿಗೆ ಅಗೌರವ ತೋರಿದ್ದಾರೆ. ಮೊದಲು ಮೇಯರ್‌ಗೆ ಗೌನ್ ಇರುತ್ತಿತ್ತು ಅದನ್ನ ಇವರು ತೆಗೆಸಿದ್ದಾರೆ. ಈಗ, ಶೇ.40 ಪೇ ಮೇಯರ್ ಎಂದು ವೈರಲ್ ಮಾಡಿದಕ್ಕೆ ಪೊಲೀಸ್ ಕಮೀಷನರ್‌ಗೆ ದೂರು ಕೊಟ್ಟಿದ್ದಾರೆ. ಮೇಯರ್ ಆದ ತಕ್ಷಣ ಅಂಚಟಗೇರಿ ಅವರು ನೆಲದ ಮೇಲೆ ನಿಲ್ಲುತ್ತಿಲ್ಲ. ಅವರು ಸರ್ವಾಧಿಕಾರ ಆಡಳಿತವನ್ನು ನಡೆಸುತ್ತಿದ್ದಾರೆ. ಅವರು ಜೋಶಿ ಶಿಷ್ಯ ಆಗಿರಬಹುದು. ರಾಷ್ಟ್ರಪತಿ ಅವರಿಗೆ ತರಾತುರಿಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಏಕೆ? ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೇ ಮೇಯರ್ ಫೋಟೋ ವೈರಲ್ ಆಗಿದ್ದಕ್ಕೆ ದೂರು ಕೊಟ್ಟಿದ್ದಾರೆ. ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ಖರ್ಚಾಗಿದೆ ಎನ್ನುತ್ತಾರೆ. ಅಷ್ಟು ಅದ್ದೂರಿಯಾಗಿ ಖರ್ಚು ಮಾಡಿದ್ದು ಏಕೆ..? ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಮಾಡಿರುವ ಸೌಲಭ್ಯಗಳನ್ನು ಹಣ ಲೂಟಿ ಮಾಡಲು ಮಾಡಿದ್ದಾರೆ. ನಾವು ಆರ್‌ಎಸ್ಎಸ್ ಸ್ವಯಂ ಸೇವಕರಲ್ಲ. ಮೇಯರ್ ಅವರು ಅಮಿತ್ ಷಾ ಆಗಲು ಹೋಗುತ್ತಿದ್ದಾರೆ. ಅವರು ತಮಗೆ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪೇ ಮೇಯರ್ ಮಾಡಿದ್ದು ನಾವಲ್ಲ. ಇದು ಜನ ಸಾಮಾನ್ಯರ ಅಭಿಯಾನವಾಗಿದೆ. ನಿರ್ಮಿತ ಕೇಂದ್ರದಿಂದ ಭ್ರಷ್ಟಾಚಾರ ಆಗಲ್ಲ ಅಂತ ಹೇಳಿ ನೋಡೋಣ? ಮೇಯರ್ ಅವರು ನಿರ್ಮಿತ ಕೇಂದ್ರದಿಂದ ಹಣ ಲೂಟಿ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ವಾಟರ್‌ಮೆನ್‌ಗಳಿಗೆ ಕಳೆದ 5 ತಿಂಗಳ ವೇತನ ನೀಡಿಲ್ಲ. ಮೇಯರ್ ಅವರಿಗೆ ಸಾಮಾನ್ಯ ಪ್ರಜೆಗಳ ಬಗ್ಗೆ ಕನಿಕರ ಇಲ್ಲ ಎಂದರು.
ಮೇಯರ್ ಅವರು ಶಾಸಕ ಆಗುವ ಉದ್ದೇಶದಿಂದ ನನ್ನ ವಿರುದ್ಧ ರಾಜಕೀಯ ಮಾಡುತ್ತಿದ್ದಾರೆ. ಅವರು ನನ್ನನ್ನು ನೇರವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಪೆಂಡಾಲ್ ಹಾಕಿದ ನಂತರ ಮೇಯರ್ ಕೊಟೇಶನ್ ಕೇಳಿ ಅವಳಿನಗರದ ಮರ್ಯಾದೆ ಹಾಳು ಮಾಡಿದ್ದಾರೆ. ರಾಷ್ಟ್ರಪತಿ ಅವರ ಕಚೇರಿಯಿಂದ ಹಣ ದುಂದು ವೆಚ್ಚ ಮಾಡು ಅಂತ ಹೇಳಿದ್ರಾ? ಜನಸಾಮಾನ್ಯರ ಕೋಟಿ ಕೋಟಿ ಹಣವನ್ನು ಗೋಲ್‌ಮಾಲ್ ಮಾಡಿದ್ದಾರೆ. ಇಂತಹ ನೂರು ದೂರು ಕೊಟ್ಟರೂ ನಾನು ಹೆದರುವುದಿಲ್ಲ. ಜನಸಾಮಾನ್ಯರ ಪರವಾಗಿ ನಾನಿರುತ್ತೇನೆ ಎಂದು ಚಿಂಚೋರೆ ಸ್ಪಷ್ಟಪಡಿಸಿದರು.
Kshetra Samachara
29/09/2022 07:01 pm