ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಇಂದು ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಸ್ವಾಗತಕ್ಕೆ ಅವಳಿನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಸಕಲ ಸಿದ್ಧತೆ ಮಾಡಲಾಗಿದೆ. ರಾಷ್ಟ್ರಪತಿ ಮುರ್ಮು ಅವರ ಸ್ವಾಗತ ಕೋರಿ ಅವಳಿನಗರದಾದ್ಯಂತ ಪ್ಲೇಕ್ಸ್ ಬ್ಯಾನರ್ ರಾರಾಜಿಸುತ್ತಿವೆ.
ಹೌದು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಆಗಮಿಸ್ತಿರುವ ಮುರ್ಮು ಅವರು, ಮಧ್ಯಾಹ್ನ 12:45ಕ್ಕೆ ಪಾಲಿಕೆಯಿಂದ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ ನಡೆಯಲಿರೋ ದ್ರೌಪದಿ ಮುರ್ಮು ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಸುಮಾರು 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವತ್ಥನಾರಾಯಣ, ಭೈರತಿ ಬಸವರಾಜ, ಹಾಲಪ್ಪ ಆಚಾರ್, ಶಂಕರ ಪಾಟೀಲ ಮುನೇನಕೊಪ್ಪ, ಮೇಯರ್ ಈರೇಶ ಅಂಚಟಗೇರಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪಾಲಿಕೆ ಸದಸ್ಯರ ಜೊತೆ ರಾಷ್ಟ್ರಪತಿಗಳ ಫೋಟೋ ಸೆಷನ್ ನಡೆಯಲಿದೆ. ನಂತರ ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಅಲ್ಲದೇ 900 ಗ್ರಾಂ ಬೆಳ್ಳಿಯ ಸಿದ್ಧಾರೂಢ ಶ್ರೀಗಳ ಮೂರ್ತಿ ನೆನಪಿನ ಕಾಣಿಕೆಯಾಗಿ ಪಾಲಿಕೆ ರಾಷ್ಟ್ರಪತಿ ಅವರಿಗೆ ಅರ್ಪಣೆ ಮಾಡುತ್ತಿದೆ. ಇನ್ನೂ ವೇದಿಕೆಯ ಮೇಲೆ ಕೇವಲ ಒಂಬತ್ತು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಸ್ವತಃ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೂ ಅವಕಾಶ ಸಿಕ್ಕಿಲ್ಲ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಜಿಮ್ ಖಾನಾ ಮೈದಾನದ ಬಳಿ ಪೊಲೀಸ್ ಸರ್ಪಗಾವಲು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಹುಬ್ಬಳ್ಳಿ ಕಾರ್ಯಕ್ರಮದ ನಂತರ ಧಾರವಾಡ ಐಐಐಟಿ ಉದ್ಘಾಟನೆಗೆ ತೆರಳಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/09/2022 08:35 am