ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಶೃಂಗಾರಗೊಳ್ಳುತ್ತಿದೆ. ಆದ್ರೆ, ಅವರು ಭಾಗಿಯಾಗುವ ಕಾರ್ಯಕ್ರಮ ವೇದಿಕೆ ಜಾಗ ವಿವಾದದಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರಥಮ ಬಾರಿಗೆ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸ್ವಾಗತಾರ್ಹ. ಆದರೆ, ವಿವಾದಾತ್ಮಕ ಜಿಮ್ ಖಾನ ಮೈದಾನದಲ್ಲಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಪಿ. ಎಚ್. ನೀರಲಕೆರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 26 ರಂದು ದೇಶಪಾಂಡೆ ನಗರದಲ್ಲಿರುವ ಕರ್ನಾಟಕ ಜಿಮ್ ಖಾನ ಅಸೋಸಿಯೇಷನ್ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂದು ರಾಷ್ಟ್ರಪತಿ ಅವರಿಗೆ ಸನ್ಮಾನ ನಡೆಯಲಿದೆ. ಸನ್ಮಾನ ಕಾರ್ಯಕ್ರಮವನ್ನು ಬೇರೆ ಸ್ಥಳದಲ್ಲಿ ನಿಗದಿ ಮಾಡಿದ್ದರೆ ಸೂಕ್ತವೆನಿಸುತ್ತಿತ್ತು.
ಆದರೆ, ಈ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಗ್ರೌಂಡ್ ಬಚಾವೋ ಅಭಿಯಾನವನ್ನು ಹಮ್ಮಿಕೊಂಡು ನಿರಂತರ ಪ್ರತಿಭಟನೆ ಮಾಡಿದ್ದರು. ಆದರೆ, ಅದೇ ಸ್ಥಳದಲ್ಲಿ ರಾಷ್ಟ್ರಪತಿಯವರ ಕಾರ್ಯಕ್ರಮ ಆಯೋಜನೆ ಮಾಡಿದ್ದು ಖಂಡನೀಯ ಎಂದರು.
ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ್ರೆ ಅವರದೇ ಆದ ಪ್ರೋಟೋಕಾಲ್ ಇರುತ್ತೆ. ಆದ್ರೆ, ಅವರ ಘನತೆ- ಗೌರವಕ್ಕೆ ತಕ್ಕುದಾದ ಜಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ವಿವಾದಾತ್ಮಕ ಜಾಗದಲ್ಲಿ ಕಾರ್ಯಕ್ರಮ ಆಯೋಜನೆ ಸರಿಯಲ್ಲ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/09/2022 03:22 pm