ಹುಬ್ಬಳ್ಳಿ: ರಾಷ್ಟ್ರಧ್ವಜ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಈಗ ನಿದ್ದೆಗಣ್ಣಿನಿಂದ ಎದ್ದು ರಾಷ್ಟ್ರಧ್ವಜ ರಕ್ಷಣೆಗೆ ಮುಂದಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ವಿಚಾರಣೆ ನಡೆಸಲು ಅಣಿಯಾಗಿದೆ. ರಾಷ್ಟ್ರಧ್ವಜ ರಕ್ಷಿಸುವಂತೆ ಅಭಿಯಾನ ಮಾಡಿದ್ದ ಪಬ್ಲಿಕ್ ನೆಕ್ಸ್ಟ್ ವರದಿಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಎನ್‌ಡಿಎ ಸರ್ಕಾರ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನ ತಿದ್ದುಪಡಿ ಮಾಡಿತ್ತು. ಆದರೆ ಈಗ ಕೇಂದ್ರ ಸರ್ಕಾರ ಎಚ್ಚರಗೊಂಡಿದೆ. ಅಲ್ಲದೇ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಕೆಲಸಕ್ಕೆ ಕೈ ಹಾಕಿದಂತೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿ ರಾಷ್ಟ್ರಧ್ವಜದ ಬಗ್ಗೆ IAS ಅಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತವಾದ ವರದಿ ಮಾಡಿತ್ತು. ಅಲ್ಲದೇ ರಾಷ್ಟ್ರಧ್ವಜ ರಕ್ಷಣೆಗಾಗಿ ಪಬ್ಲಿಕ್ ನೆಕ್ಸ್ಟ್ ವಿಶೇಷ ಅಭಿಯಾನ ನಡೆಸಿತ್ತು. ಪಬ್ಲಿಕ್ ನೆಕ್ಸ್ಟ್ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ನರೇಂದ್ರ ಮೋದಿ ಸರ್ಕಾರ ಕೇಂದ್ರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ವಿಚಾರಣೆ ಮಾಡಿಸಿದೆ.
ಈಗಾಗಲೇ ಹುಬ್ಬಳ್ಳಿಯ ಬೆಂಗೇರಿಗೆ ಭೇಟಿ ನೀಡಿದ IAS ಅಧಿಕಾರಿಯ ನೇತೃತ್ವದ ತಂಡ ರಾಷ್ಟ್ರಧ್ವಜ ತಯಾರಕ ಘಟಕದಲ್ಲಿ ಸದ್ಯದ ಪರಿಸ್ಥಿತಿ ಏನಿದೆ? ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿದ್ದರಿಂದ ಖಾದಿ ರಾಷ್ಟ್ರಧ್ವಜಗಳ ಮೇಲೆ ಯಾವ ಪರಿಣಾಮ ಬೀರಿದೆ? ರಾಷ್ಟ್ರಧ್ವಜ ತಯಾರಕ ಘಟಕಕ್ಕೆ ಎಷ್ಟು ನಷ್ಟವಾಗಿದೆ ಎಂಬುದರ ವರದಿ ನೀಡುವಂತೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಆದೇಶದ ಹಿನ್ನೆಲೆಯಲ್ಲಿ IAS ಅಧಿಕಾರಿಯ ತಂಡ ಪ್ರತಿಯೊಂದು ಮಾಹಿತಿಯನ್ನ ಸಂಗ್ರಹಣೆ ಮಾಡಿದೆ. ಈ ವರದಿಯು ಇನ್ನೂ ಎರಡು ದಿನಗಳಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಕೈ ತಲುಪಲಿದೆ.
ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಘಟಕ ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ. ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆ ಮಾನಕ್ ಬ್ಯೂರೊದಿಂದ ಅನುಮತಿ ಪಡೆದಿದೆ. ಈ ಸಂಸ್ಥೆಯನ್ನೇ ಮುಚ್ಚಿ ಹಾಕಲು ನರೇಂದ್ರ ಮೋದಿ ಸರ್ಕಾರ ಹುನ್ನಾರ ನಡೆಸಿತ್ತು. 2002ರ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನ ಕೇಂದ್ರದ ಗೃಹ ಇಲಾಖೆ 2021 ಡಿಸೆಂಬರ್‌ನಲ್ಲಿ ತಿದ್ದುಪಡಿ ಮಾಡಿತ್ತು. ಈ ಮುಂಚೆ ಖಾದಿ ಮತ್ತು ರೇಷ್ಮೆಯ ಬಟ್ಟೆಗಳಿಂದ ತಯಾರಿಸಿದ ಧ್ವಜವನ್ನೇ ಹಾರಿಸಲು ಮಾತ್ರ ಇತ್ತು ಅವಕಾಶವಿತ್ತು. ಆದರೆ ಹೊಸ ತಿದ್ದುಪಡಿಯಲ್ಲಿ ಪಾಲಿಸ್ಟರ್ ಬಟ್ಟೆಯ ಧ್ವಜಗಳಿಗೆ ಅವಕಾಶ, ಅಲ್ಲದೇ ಯಂತ್ರದಿಂದ ತಯಾರಿಸಿದ ರಾಷ್ಟ್ರಧ್ವಜಗಳಿಗೂ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಈ ಬಿಜೆಪಿ ಸರ್ಕಾರದ ನೀತಿ ವಿರೋಧಿಸಿ ಪಬ್ಲಿಕ್ ನೆಕ್ಸ್ಟ್ ಅಭಿಯಾನ ಮಾಡಿತ್ತು. ಅಲ್ಲದೇ ಇತ್ತಿಚೆಗೆ ಖಾದಿ ಗ್ರಾಮೋದ್ಯೋಗಕ್ಕೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಸಹ ಭೇಟಿ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗ ಅಲರ್ಟ್ ಆದ ನರೇಂದ್ರ ಮೋದಿ ಸರ್ಕಾರ ರಾಷ್ಟ್ರಧ್ವಜ ಮಹತ್ವ ಅರಿಯಲು ಮುಂದಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/08/2022 12:26 pm